
ಬೆಂಗಳೂರು: ‘ಜೀವನ್ ಸಾಥಿ’ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದ ಮಹಿಳೆಯಿಂದ ಸೈಬರ್ ವಂಚಕರು ಹಣ ದೋಚಿದ್ದಾರೆ. ಸಂಗಾತಿಯ ಹುಡುಕಾಟದಲ್ಲಿದ್ದ ಮಹಿಳೆ, ಈಗ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.
₹15.94 ಲಕ್ಷ ಹಣ ಕಳೆದುಕೊಂಡಿರುವ ಭಟ್ಟರಹಳ್ಳಿಯ ನಿವಾಸಿ, 41 ವರ್ಷದ ಮಹಿಳೆ ದೂರು ನೀಡಿದ್ದಾರೆ. ದೂರು ಆಧರಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವೈಟ್‌ಫೀಲ್ಡ್ ಸೈಬರ್ ಅಪರಾಧ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಹಣ ದೋಚಲು ಸೈಬರ್ ಕಳ್ಳರು ನಾನಾ ತಂತ್ರ ಅನುಸರಿಸುತ್ತಿದ್ದಾರೆ. ಇದೀಗ ಮದುವೆಗೆ ವರನ ಹುಡುಕಾಟದಲ್ಲಿರುವ ಮಹಿಳೆಯರು ಹಾಗೂ ಯುವತಿಯರನ್ನು ಗುರಿಯಾಗಿಸಿ, ನಂಬಿಸಿ ವಂಚಿಸುತ್ತಿದ್ದಾರೆ. ಈ ರೀತಿಯ ಅನೇಕ ಪ್ರಕರಣಗಳು ನಗರದಲ್ಲಿ ವರದಿ ಆಗುತ್ತಿದ್ದು, ಅವರೆಲ್ಲರೂ ಠಾಣೆಯ ಮೆಟ್ಟಿಲೇರುತ್ತಿದ್ದಾರೆ.
‘ಮದುವೆ ಮಾಡಿಕೊಳ್ಳಲು ವರನ ಹುಡುಕಾಟದಲ್ಲಿದ್ದ ಮಹಿಳೆ, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ‘ಜೀವನ್ ಸಾಥಿ’ಯಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಮೀಸಲಾದ ಪ್ರತ್ಯೇಕ ವಿಭಾಗದಲ್ಲಿ ಕೆಲವು ತಿಂಗಳ ಹಿಂದೆ ನೋಂದಣಿ ಮಾಡಿಕೊಂಡು, ಸ್ವವಿವರ ಹಾಕಿದ್ದರು. ಕೆಲವು ದಿನಗಳು ಕಳೆದ ಮೇಲೆ ಫ್ಯಾಬಿಯನ್ ಡಿಸೋಜ ಹೆಸರಿನ ವ್ಯಕ್ತಿಯೊಬ್ಬರು, ಫೇಸ್‌ಬುಕ್‌ನ ಮೆಸೆಂಜರ್‌ನಲ್ಲಿ ‘ನಿಮಗೆ ಹೊಂದಾಣಿಕೆ ಆಗುವ ವರನಿದ್ದಾನೆ’ ಎಂಬುದಾಗಿ ಸಂದೇಶ ಕಳುಹಿಸಿದ್ದರು.
ಸಂದೇಶದ ಜತೆಗೆ ಮೊಬೈಲ್ ಸಂಪರ್ಕ ಸಂಖ್ಯೆಯನ್ನೂ ಹಾಕಿದ್ದರು. ಮಿಲ್ಟನ್ ಹೆಸರಿನ ವ್ಯಕ್ತಿ ಕರೆ ಮಾಡಿ, ‘ನಿಮ್ಮನ್ನು ಮದುವೆ ಮಾಡಿಕೊಳ್ಳುತ್ತೇನೆ’ ಎಂಬುದಾಗಿ ಹೇಳಿಕೊಂಡಿದ್ದರು. ನಂಬಿಕೆ ಬರುವಂತೆಯೂ ಮಹಿಳೆಯ ಜತೆಗೆ ಮಿಲ್ಟನ್ ಮಾತನಾಡಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಫ್ಲ್ಯಾಟ್ ಖರೀದಿಸುವುದಾಗಿ ಹೇಳಿದ್ದ ಆರೋಪಿ: ‘ಮದುವೆಯಾದ ಮೇಲೆ ಚೆನ್ನಾಗಿ ಸಂಸಾರ ಸಾಗಿಸೋಣ. ಅದಕ್ಕೆ ನಮ್ಮದೇ ಪುಟ್ಟ ಗೂಡು ಬೇಕಿದೆ. ಅದಕ್ಕಾಗಿ ಫ್ಲ್ಯಾಟ್ ಖರೀದಿಸಲು ನಿರ್ಧರಿಸಿದ್ದೇನೆ. ಫ್ಲ್ಯಾಟ್ ಖರೀದಿಸಲು ಸಾಲ ಬೇಕಿದೆ’ ಎಂಬುದಾಗಿ ಮಿಲ್ಟನ್ ಅವರು ಮಹಿಳೆಗೆ ತಿಳಿಸಿದ್ದರು. ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಪಡೆದುಕೊಳ್ಳಲು ಇಮ್ರಾನ್ ಅವರು ನೆರವು ನೀಡಲಿದ್ದಾರೆ ಎಂದು ಹೇಳಿ, ಅವರ ಮೊಬೈಲ್ ಸಂಖ್ಯೆಯನ್ನು ಮಿಲ್ಟನ್ ಕಳುಹಿಸಿದ್ದರು. ಅವರ ಮಾತು ನಂಬಿದ್ದ ದೂರುದಾರೆ, ಸೇಂಟ್ ಫಿಲೊಮಿನಾ ಆಸ್ಪತ್ರೆಯ ಬಳಿ ಇಮ್ರಾನ್ ಅವರನ್ನು ಭೇಟಿ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.
ಮಹಿಳೆಯ ಹೆಸರಿನಲ್ಲೇ ಸಾಲ
ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದ ಇಮ್ರಾನ್ ಅವರು ನಾಲ್ಕು ಬೇರೆ ಬೇರೆ ಖಾಸಗಿ ಹಣಕಾಸು ಸಂಸ್ಥೆಗಳಿಂದ ಮಹಿಳೆಯ ಹೆಸರಿಗೆ ₹14.29 ಲಕ್ಷ ಸಾಲ ಮಂಜೂರು ಮಾಡಿಸಿದ್ದರು. ಆ ಹಣವೂ ಸೇರಿದಂತೆ ಒಟ್ಟು ₹15.94 ಲಕ್ಷವನ್ನು ಸೈಬರ್ ವಂಚಕ ಮಿಲ್ಟನ್ ಅವರು ನೀಡಿದ್ದ ಬ್ಯಾಂಕ್ ಖಾತೆಗೆ ಮಹಿಳೆ ವರ್ಗಾವಣೆ ಮಾಡಿದ್ದರು.
‘ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಅಷ್ಟಾಗಿ ನಿಮಗೆ ಅರಿವು ಇಲ್ಲ. ನಿಮ್ಮ ಎರಡು ಬ್ಯಾಂಕ್ ಖಾತೆಗಳನ್ನು ನಾನೇ ನಿರ್ವಹಣೆ ಮಾಡುತ್ತೇನೆ’ ಎಂದೂ ಮಹಿಳೆಯನ್ನು ಆರೋಪಿ ನಂಬಿಸಿದ್ದರು. ಎಚ್‌ಡಿಎಫ್‌ಸಿ ಆ್ಯಕ್ಸಿಸ್ ಬ್ಯಾಂಕ್ ಖಾತೆಗಳ ವಿವರನ್ನೂ ಮಹಿಳೆ ನೀಡಿದ್ದರು. ಅದಾದ ಮೇಲೆ ಮದುವೆಯನ್ನೂ ಆಗದೇ ಹಣವನ್ನೂ ವಾಪಸ್ ನೀಡದೇ ವಂಚನೆ ನಡೆಸಲಾಗಿದೆ’ ಎಂದು ಸೈಬರ್ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.