ADVERTISEMENT

ಪ್ಯಾರಾ ಒಲಂಪಿಕ್‌ಗಾಗಿಯೇ ಪ್ರತ್ಯೇಕ ಸ್ಟೇಡಿಯಂ‌ ನಿರ್ಮಾಣ: ಜಿ. ಪರಮೇಶ್ವರ್ ಭರವಸೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 5:45 IST
Last Updated 20 ನವೆಂಬರ್ 2018, 5:45 IST
   

ಬೆಂಗಳೂರು: 'ಪ್ಯಾರಾ ಒಲಂಪಿಕ್‌ಗಾಗಿ ಪ್ರತ್ಯೇಕ ಸ್ಟೇಡಿಯಂ‌ ನಿರ್ಮಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದು' ಎಂದು ಯುವಜನ ಮತ್ತು ಕ್ರೀಡಾ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಭರವಸೆ ನೀಡಿದರು.

ಇದೇ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಪ್ಯಾರಾ ಏಷಿಯನ್‌ ಗೇಮ್ಸ್‌ ನಲ್ಲಿ ಒಂಬತ್ತು ಪದಕ ಪಡೆದ ಏಳು ಅಂಗವಿಕಲ ಕ್ರೀಡಾಪಟುಗಳನ್ನು ಮಂಗಳವಾರ ಸನ್ಮಾನಿಸಿ ಅವರು ಮಾತನಾಡಿದರು.

'ರಾಜ್ಯ ಸರ್ಕಾರ ಕ್ರೀಡೆಗೆ ಪ್ರೋತ್ಸಾಹ ನೀಡಲು ಬದ್ಧ. ಮುಂದಿನ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ಪ್ಯಾರಾ ಒಲಂಪಿಕ್‌ಗಾಗಿಯೇ ಪ್ರತ್ಯೇಕ ಸ್ಟೇಡಿಯಂ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು' ಎಂದರು.

ADVERTISEMENT

ಪ್ಯಾರಾ ಒಲಂಪಿಕ್‌ನಲ್ಲಿ‌ ಚಿನ್ನ ಗಳಿಸಿದ ರಕ್ಷಿತಾ ಆರ್, ಬೆಳ್ಳಿ ಹಾಗೂ ಕಂಚು ಪದಕ ವಿಜೇತೆ ವಿ. ರಾಧಾ, ಜಾವಲಿ ಥ್ರೋ ವಿಭಾಗದಲ್ಲಿ ಕಂಚು ಪಡೆದ ಎನ್‌.ಎಸ್‌. ರಮ್ಯಾ, ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಕಂಚು ವಿಜೇತ ಆನಂದ ಕುಮಾರ್, ಚೆಸ್‌ನಲ್ಲಿ ಚಿನ್ನದ ವಿಜೇತ ಕಿಶನ್ ಗಂಗೋಲಿ, ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ ಬೆಳ್ಳಿ ವಿಜೇತ ಫರ್ಮಾನ್‌ ಬಾಷಾ ಹಾಗೂ ಶಕಿನಾ ಕತುನ್‌ ಅವರನ್ನು ಪರಮೇಶ್ವರ ಅವರು ಅಭಿನಂದಿಸಿದರು.

ಮಾರ್ಚ್‌ ಒಳಗೆ ತೆರಿಗೆ ಸಂಗ್ರಹಿಸಲು ಸೂಚನೆ:
'ಬಿಬಿಎಂಪಿಗೆ ಆಸ್ತಿ ತೆರಿಗೆ ಬಾಕಿ ಪಾವತಿ ಉಳಿಸಿಕೊಂಡವರು ಯಾರೇ ಇದ್ದರೂ ಮುಂದಿನ‌ ಮಾರ್ಚ್‌ ಒಳಗಾಗಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದು ಪರಮೇಶ್ವರ ತಿಳಿಸಿದರು.

ಈ ಆರ್ಥಿಕ ವರ್ಷದಲ್ಲಿ 3 ಸಾವಿರ ಕೋಟಿ ರೂಪಾಯಿಯಲ್ಲಿ ಈಗಾಗಲೇ 2,031 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಮಾರ್ಚ್‌ ಒಳಗಾಗಿ ಈ ಗುರಿ ತಲುಪಲಿದ್ದೇವೆ. ಹಿಂದಿನ‌ ಬಾಕಿ ತೆರಿಗೆ ಎರಡು ಸಾವಿರ ಕೋಟಿ ರೂಪಾಯಿ ಇದ್ದು, 350 ಕೋಟಿ ಸಂಗ್ರಹಿಸಲಾಗಿದೆ ಎಂದರು.

ರೈತರ ಹಿತ ಕಾಪಾಡಲು ಬದ್ಧ:
'ರೈತರ ಹಿತವೇ ನಮ್ಮ ಸರಕಾರಕ್ಕೆ ಬಹಳ ಮುಖ್ಯ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಅವರಿಂದ ರೈತರ ಬಗ್ಗೆ ಪಾಠ ಕಲಿಯಬೇಕಿಲ್ಲ. ಹಸಿರು ಕ್ರಾಂತಿ ನೀತಿ ಮಾಡಿದ್ದೇ ಕಾಂಗ್ರೆಸ್‌'' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.