ಬೆಂಗಳೂರು: ‘ಯಲಹಂಕದಲ್ಲಿ ₹5,754 ಕೋಟಿ ವೆಚ್ಚದಲ್ಲಿ ‘ಮೆಗಾ ಕೋಚಿಂಗ್ ಟರ್ಮಿನಲ್’ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದು ದೇಶದ ಅತಿದೊಡ್ಡ ಕೋಚಿಂಗ್ ಸೆಂಟರ್ ಆಗಲಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಮಂಗಳವಾರ ಹಸಿರು ನಿಶಾನೆ ತೋರಿದ ಬಳಿಕ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
‘ದೇವನಹಳ್ಳಿಯಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಿಸಲು ಆರಂಭದಲ್ಲಿ ಉದ್ದೇಶಿಸಲಾಗಿತ್ತು. ದೂರದ ಕಾರಣಕ್ಕೆ ಯಲಹಂಕಕ್ಕೆ ಸ್ಥಳಾಂತರಿಸಲಾಗಿದೆ. ಕಾರ್ಯಸಾಧ್ಯತೆ ಅಧ್ಯಯನಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ’ ಎಂದು ಮಾಹಿತಿ ನೀಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ₹1,370 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು. ಯಶವಂತಪುರ ಹಾಗೂ ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ವೈಟ್‌ಫೀಲ್ಡ್‌ನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ ತನಕ ನಾಲ್ಕು ಪಥದ ರೈಲು ಮಾರ್ಗ ನಿರ್ಮಾಣ ಕಾಮಗಾರಿಯು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ತುಮಕೂರು–ಬೆಂಗಳೂರು ನಾಲ್ಕು ಪಥದ ಯೋಜನೆಗೆ ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಸಚಿವ ಸಂಪುಟಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ವೈಟ್‌ಫೀಲ್ಡ್‌ನಿಂದ ಕೋಲಾರಕ್ಕೆ ನೇರ ರೈಲು ಸಂಪರ್ಕಕ್ಕಾಗಿ ಸಮೀಕ್ಷೆ ನಡೆಸಲು ಡಿಆರ್‌ಎಂ ಅವರಿಗೆ ಸೂಚನೆ ನೀಡಲಾಗಿದೆ ಎಂದು ಸೋಮಣ್ಣ ಮಾಹಿತಿ ನೀಡಿದರು.
ಸಂಚಾರ ದಟ್ಟಣೆ ತಗ್ಗಿಸಲು ಕೇಂದ್ರ ಸರ್ಕಾರವು ಕೆಳಸೇತುವೆಗಳು ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಿ, ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ತೆಗೆದುಹಾಕಲು ಆದ್ಯತೆ ನೀಡುತ್ತಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ₹7,748 ಕೋಟಿ ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ ₹52,950 ಕೋಟಿ ಮೊತ್ತದ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.
ವಸತಿ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ‘ಮೇಲ್ಸೇತುವೆಯನ್ನು ಪೂರ್ಣಗೊಳಿಸುವ ಮೂಲಕ ಜನರ ಬಹುಕಾಲದ ಬೇಡಿಕೆ ಈಡೇರಿದೆ’ ಎಂದು ಹೇಳಿದರು.
ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ ಪುರಿಯಾ ಉಪಸ್ಥಿತರಿದ್ದರು.
ನಾಯಂಡಹಳ್ಳಿಯ ರೈಲು ನಿಲ್ದಾಣದಲ್ಲಿ ಮೈಸೂರು–ಕೆಎಸ್ಆರ್ ಬೆಂಗಳೂರು (ಮೈಸೂರು ಚಾಮುಂಡಿ ಎಕ್ಸ್‌ಪ್ರೆಸ್) ಮೈಸೂರು–ಬಾಗಲಕೋಟೆ (ಮೈಸೂರು ಬಸವ ಎಕ್ಸ್‌ಪ್ರೆಸ್) ತೂತ್ತುಕುಡಿ– ಮೈಸೂರು (ತೂತ್ತುಕುಡಿ ಎಕ್ಸ್‌ಪ್ರೆಸ್) ಮೈಸೂರು– ಪಂಢರಪುರ (ಮೈಸೂರು ಗೋಲ್‌ಗುಂಬಜ್ ಎಕ್ಸ್‌ಪ್ರೆಸ್) ರೈಲುಗಳ ನಿಲುಗಡೆಗೆ ಸೋಮಣ್ಣ ಚಾಲನೆ ನೀಡಿದರು. ಎಕ್ಸ್‌ಪ್ರೆಸ್ ರೈಲುಗಳು ನಾಯಂಡಹಳ್ಳಿ ನಿಲ್ದಾಣದಲ್ಲಿ ನಿಲುಗಡೆ ಮಾಡುವುದರಿಂದ ಸುತ್ತಮುತ್ತಲ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.
‘ರಾಜ್ಯ ರಾಜಕಾರಣಕ್ಕೆ ಬರುವ ಯೋಚನೆ ಸದ್ಯಕ್ಕೆ ಇಲ್ಲ’ ಎಂದು ಸಚಿವ ವಿ.ಸೋಮಣ್ಣ ಹೇಳಿದರು. ‘ಪಕ್ಷ ಯಾವ ಜವಾಬ್ದಾರಿ ವಹಿಸುತ್ತದೊ ಅದನ್ನು ಮಾಡುತ್ತೇನೆ. ವ್ಯಕ್ತಿಗಿಂತ ಪಕ್ಷ ದೊಡ್ಡದು. ಹೈಕಮಾಂಡ್ ಹೇಳಿದಂತೆ ನಾನು ಕೇಳುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.