ADVERTISEMENT

ಕಾರುಗಳಿಗೆ ಬೆಂಕಿ ಹಚ್ಚಿದ ಬಾಲಕ!

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 19:44 IST
Last Updated 20 ಮಾರ್ಚ್ 2019, 19:44 IST

ಬೆಂಗಳೂರು: ಜ್ಞಾನಭಾರತಿ ಸಮೀಪದ ರೈಲ್ವೆ ಲೇಔಟ್‌ನಲ್ಲಿ ಮಾನಸಿಕ ಅಸ್ವಸ್ಥ ಬಾಲಕನೊಬ್ಬ ಮೂರು ಕಾರುಗಳಿಗೆ ಬೆಂಕಿ ಹಚ್ಚಿದ್ದಾನೆ.

ಪೋಷಕರೊಂದಿಗೆ ಬಾಪೂಜಿ ಲೇಔಟ್‌ನಲ್ಲಿ ನೆಲೆಸಿರುವ ಬಾಲಕ, ಸ್ಥಳೀಯ ಶಾಲೆಯಲ್ಲಿ 9ನೇ
ತರಗತಿ ವಿದ್ಯಾರ್ಥಿ. ಬುಧವಾರ ನಸುಕಿನ ವೇಳೆ (3.30ರ ಸುಮಾರಿಗೆ) ಖಾಲಿ ಕ್ಯಾನ್‌ನೊಂದಿಗೆ ಮನೆಯಿಂದ ಹೊರಬಂದಿದ್ದ ಆತ, ರಸ್ತೆ ಬದಿ ನಿಲ್ಲಿಸಲಾಗಿದ್ದ ಬೈಕ್‌ನಿಂದ ಪೆಟ್ರೋಲ್ ಕದ್ದಿದ್ದ.

ನಂತರ ಆ ಪೆಟ್ರೋಲನ್ನು ಮಾರುತಿ ವ್ಯಾನ್, ಝೆನ್ ಹಾಗೂ ಇನ್ನೋವಾ ಕಾರುಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದ. ವಾಹನಗಳು ಹೊತ್ತಿ ಉರಿಯುತ್ತಿರುವುದನ್ನು ನೋಡಿದ ಸ್ಥಳೀಯರೊಬ್ಬರು, ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಕಾರುಗಳು ಪೂರ್ತಿ ಸುಟ್ಟುಹೋಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ಬಾಲಕ ಮೂರು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಪೋಷಕರು ಆತನಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸದ್ಯ ಆತನನ್ನು ಬಾಲಮಂದಿರಕ್ಕೆ ಬಿಡಲಾಗಿದ್ದು, ಆಪ್ತ ಸಮಾಲೋಚನೆ ಮಾಡಿಸಲಾಗುತ್ತಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗೋಡೆ ಜತೆ ಮಾತು!

‘ಎಷ್ಟೇ ಚಿಕಿತ್ಸೆ ಕೊಡಿಸಿದರೂ ಮಗನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿಲ್ಲ. ಮನೆಯಲ್ಲಿ ಗೋಡೆಗಳ ‌ಮುಂದೆ ಮಾತನಾಡುತ್ತ ಕೂರುವ ಆತ, ರಾತ್ರಿ ವೇಳೆ ಮನೆಯಿಂದ ಹೊರಗೆ ಹೋಗಿ ಬೀದಿ ನಾಯಿಗಳ ಜೊತೆ ಆಟವಾಡುತ್ತಾನೆ. ಹೀಗಾಗಿ, ದಿಕ್ಕು ತೋಚದ ಸ್ಥಿತಿಯಲ್ಲಿದ್ದೇವೆ’ ಎಂದು ಪೋಷಕರು ಹೇಳಿಕೆ ಕೊಟ್ಟಿದ್ದಾಗಿ ಜ್ಞಾನಭಾರತಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.