ಯಲಹಂಕ: ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅಂಕ ಗಳಿಸುವುದಕ್ಕಿಂತಲೂ ಜೀವನದ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾದುದು ಅತಿ ಮುಖ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಪ್ರೊ.ಎನ್.ನಾಗರಾಜ ಅಭಿಪ್ರಾಯಪಟ್ಟರು.
ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ತರಗತಿಗಳ ನೂತನ ವಿದ್ಯಾರ್ಥಿಗಳಿಗೆ 33ನೇ ಪುನರ್ಮನನ ಹಾಗೂ ಮೆರಿಟ್ ವಿದ್ಯಾರ್ಥಿವೇತನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಣ ಕ್ಷೇತ್ರದಲ್ಲಿ ಗುರುಗಳ ಪಾತ್ರ ಮಹತ್ತರವಾದುದು. ನಾವು ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೆ ಏರಿ, ಏನೇ ಸಾಧನೆ ಮಾಡಿದ್ದರೂ ಅದಕ್ಕೆಲ್ಲಾ ಗುರುಗಳ ಪಾಠ ಮತ್ತು ಪರಿಶ್ರಮವೇ ಕಾರಣ’ ಎಂದರು.
ಶಿಕ್ಷಣ ತಜ್ಞ ವೂಡೆ.ಪಿ.ಕೃಷ್ಣ ಮಾತನಾಡಿ, ‘ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಶೇಷಾದ್ರಿಪುರ ಶಿಕ್ಷಣ ಸಂಸ್ಥೆ ಹಿಂದಿನಿಂದಲೂ ನಡೆಸಿಕೊಂಡು ಬಂದಿದೆ. ಈ ವರ್ಷ ಶೇಷಾದ್ರಿಪುರ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿ ಪಿಯು ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಒಟ್ಟು ₹1.60 ಕೋಟಿ ಮೆರಿಟ್ ವಿದ್ಯಾರ್ಥಿವೇತನ ವಿತರಿಸಲಾಗಿದೆ’ ಎಂದು ತಿಳಿಸಿದರು.
ಶೇಷಾದ್ರಿಪುರ ಶಿಕ್ಷಣದತ್ತಿಯ ಉಪಾಧ್ಯಕ್ಷ ಟಿ.ಎಸ್.ಹೆಂಜಾರಪ್ಪ, ಸಹ ಕಾರ್ಯದರ್ಶಿ ಎಂ.ಎಸ್.ನಟರಾಜ್, ಧರ್ಮದರ್ಶಿ ಅಶೋಕ್, ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ)ಸಮನ್ವಯಾಧಿಕಾರಿ ಎಂ.ಎಲ್.ಅಶೋಕ್, ಪ್ರಾಂಶುಪಾಲ ಎಸ್.ಎನ್.ವೆಂಕಟೇಶ್, ಸ್ಫೂರ್ತಿ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಪ್ರೊ.ಸಿದ್ದಲಿಂಗಸ್ವಾಮಿ.ಎಚ್.ಎಂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.