ಬೆಂಗಳೂರು: ‘ನಮ್ಮ ಮೆಟ್ರೊ ರೈಲು ಯೋಜನೆಯ 1 ಮತ್ತು 2ನೇ ಹಂತದ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಷರತ್ತುಗಳನ್ನು ಪಾಲಿಸಿದೆಯೇ, ಇಲ್ಲವೇ ಎಂಬ ಬಗ್ಗೆ ವರದಿ ಸಲ್ಲಿಸಿ’ ಎಂದು ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತಂತೆ ದೊಮ್ಮಲೂರು ನಿವಾಸಿ ಡಿ.ಟಿ. ದೇವರೆ ಹಾಗೂ ‘ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
‘ಯೋಜನೆಗೆ ಅನುಮೋದನೆ ನೀಡುವಾಗ ವಿಧಿಸಲಾಗಿರುವ ಷರತ್ತುಗಳನ್ನು ರಾಜ್ಯ ಸರ್ಕಾರ ಹಾಗೂ ಬಿಎಂಆರ್‌ಸಿಎಲ್ ವತಿಯಿಂದ ಪಾಲನೆ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲಿಸಿ ಮಾರ್ಚ್ 16ರೊಳಗೆ ವರದಿ ಸಲ್ಲಿಸಿ’ ಎಂದು ನ್ಯಾಯಪೀಠ ನಿರ್ದೇಶಿಸಿದೆ.
‘ಷರತ್ತುಗಳನ್ನು ಪಾಲಿಸಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದರೆ, ಪ್ರಗತಿಯಲ್ಲಿರುವ ಕಾಮಗಾರಿ ಸ್ಥಗಿತಗೊಳಿಸಲು ಆದೇಶಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್‌ಗೆ ಎಚ್ಚರಿಸಿ, ವಿಚಾರಣೆ ಮುಂದೂಡಿದೆ.
ಹೆದ್ದಾರಿ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.