ADVERTISEMENT

ಬಿಎಂಆರ್‌ಸಿಎಲ್‌, ಎನ್‌ಸಿಸಿ ಅಧಿಕಾರಿಗಳ ವಿರುದ್ಧ ಆರೋಪ ಪಟ್ಟಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 23:51 IST
Last Updated 29 ಜೂನ್ 2023, 23:51 IST
ನಮ್ಮ ಮೆಟ್ರೊ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ ಉರುಳಿರುವ ಚಿತ್ರ
ನಮ್ಮ ಮೆಟ್ರೊ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ ಉರುಳಿರುವ ಚಿತ್ರ   

ಬೆಂಗಳೂರು: ಹೆಣ್ಣೂರು ಕ್ರಾಸ್ ಬಳಿ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿಬಿದ್ದು ತಾಯಿ–ಮಗು ಮೃತಪಟ್ಟಿದ್ದ ಪ್ರಕರಣದಲ್ಲಿ ಬಿಎಂಆರ್‌ಸಿಎಲ್‌ ಹಾಗೂ ಎನ್‌ಸಿಸಿ ಅಧಿಕಾರಿಗಳ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.

ಜ. 10ರಂದು ನಡೆದಿದ್ದ ಘಟನೆಯಲ್ಲಿ ತೇಜಸ್ವಿನಿ‌ ಸುಲಾಖೆ (28) ಹಾಗೂ ಎರಡೂವರೆ ವರ್ಷದ ‌ಮಗ ವಿಹಾನ್ ಮೃತಪಟ್ಟಿದ್ದರು. ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಗೋವಿಂದಪುರ ಠಾಣೆ ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

‘ಬಿಎಂಆರ್‌ಸಿಎಲ್ ಮುಖ್ಯ ಎಂಜಿನಿಯರ್ ಸಿ.ಎಂ. ರಂಗನಾಥ್, ಉಪ ಮುಖ್ಯ ಎಂಜಿನಿಯರ್ ಡಿ. ವೆಂಕಟೇಶ್ ಶೆಟ್ಟಿ, ಕಾರ್ಯನಿರ್ವಾಹಕ ಮುಖ್ಯ ಎಂಜಿನಿಯರ್ ಮಹೇಶ್, ಸೆಕ್ಷನ್ ಎಂಜಿನಿಯರ್ ಜಾಫರ್ ಸಾದಿಕ್, ಸಹಾಯಕ ಎಂಜಿನಿಯರ್ ಜೀವನ್‌ಕುಮಾರ್ ಹಾಗೂ ನಾಗಾರ್ಜುನ್ ಕನ್‌ಸ್ಟ್ರಕ್ಷನ್‌ನ (ಎನ್‌ಸಿಸಿ) ಯೋಜನಾ ವ್ಯವಸ್ಥಾಪಕ ವಿಕಾಸ್‌ಕುಮಾರ್ ಸಿಂಗ್, ಹಿರಿಯ ಯೋಜನಾ ವ್ಯವಸ್ಥಾಪಕ ಎ. ಮಾತಯ್ಯ, ಸಹಾಯಕ ಎಂಜಿನಿಯರ್ ಪ್ರಭಾಕರ್ ಮಾಳಿ, ಸುರಕ್ಷತಾ ಮೇಲ್ವಿಚಾರಕ ಭರತೇಶ್ ಸತ್ತಿಗೇರಿ ಹಾಗೂ ಮೇಲ್ವಿಚಾರಕ ಕೆ. ಲಕ್ಷ್ಮಿಪತಿ ರಾಜು ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ ಪುರಾವೆಗಳನ್ನು ಸಂಗ್ರಹಿಸಿ, ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.