ADVERTISEMENT

ಕೋವಿಡ್ | ‘ವೇತನ ಕೊಡಿ; ಊರಿಗೆ ಕಳುಹಿಸಿ’: ಮೆಟ್ರೊ ನಿರ್ಮಾಣ ಕಾರ್ಮಿಕರ ಪ್ರತಿಭಟನೆ

ಒಂದೇ ಕೊಠಡಿಯಲ್ಲಿ 20 ಜನರಿಗೆ ವ್ಯವಸ್ಥೆ ಮಾಡಿರುವುದಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಮೇ 2020, 14:56 IST
Last Updated 3 ಮೇ 2020, 14:56 IST
ಊರಿಗೆ ತೆರಳಲು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ‘ನಮ್ಮ ಮೆಟ್ರೊ’ ಕಾರ್ಮಿಕರು 
ಊರಿಗೆ ತೆರಳಲು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ‘ನಮ್ಮ ಮೆಟ್ರೊ’ ಕಾರ್ಮಿಕರು    

ಬೊಮ್ಮನಹಳ್ಳಿ: ಹೊಸೂರು ರಸ್ತೆ ಬೊಮ್ಮನಹಳ್ಳಿಯ ಕಾಂಕ್ರಿಟ್ ಮಿಕ್ಸಿಂಗ್ ನ ಆವರಣದಲ್ಲಿ ಶನಿವಾರ ‘ನಮ್ಮ ಮೆಟ್ರೊ’ ಕಟ್ಟಡ ಕಾರ್ಮಿಕರು ‘ನಮ್ಮನ್ನು ಊರಿಗೆ ಕಳುಹಿಸಿ ಕೊಡಿ’ ಎಂದು ಧಿಡೀರ್ ಪ್ರತಿಭಟನೆ ನಡೆಸಿದರು.

ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌)ಕಾಂಕ್ರಿಟ್ ಮಿಕ್ಸಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಕಾರ್ಮಿಕರು, ‘ನಮಗೆ ಕೆಲಸ ಬೇಡ, ದುಡಿದ ಕೂಲಿ ಕೊಟ್ಟು ನಮ್ಮನ್ನು ಊರಿಗೆ ತಲುಪಿಸಿ’ ಎಂದು ಕಾರ್ಖಾನೆ ದ್ವಾರದ ಬಳಿ ಬಂದು ಪ್ರತಿಭಟಿಸಿದರು. ಬೆಳಿಗ್ಗೆ ಬಿಎಂಆರ್‌ಸಿಎಲ್‌ಅಧಿಕಾರಿಗಳ ಕಾರನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಯಾಣಕ್ಕೆ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದುಕೊಂಡ ಕಾರ್ಮಿಕರು, ಸಂಜೆಯಾದರೂ ಅಧಿಕಾರಿಗಳು ಈ ನಿಟ್ಟಿನಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದರಿಂದ ಕೋಪಗೊಂಡ ಕಾರ್ಮಿಕರು ಮತ್ತೆ ಪ್ರತಿಭಟನೆ ನಡೆಸಿದರು.

ADVERTISEMENT

‘ನಾವು ಬಹಳ ಹಿಂದೆಯೇ ನಮ್ಮನ್ನು ಊರಿಗೆ ಕಳುಹಿಸಿ ಎಂದು ಕೇಳಿದ್ದೆವು, ಲಾಕ್ ಡೌನ್ ಮುಗಿದ ಕೂಡಲೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಇಲ್ಲೇ ಕೆಲಸ ಮಾಡಿ ಎನ್ನುತ್ತಿದ್ದಾರೆ, ನಮಗೆ ಯಾವ ಕೆಲಸವೂ ಬೇಡ, ಆದಷ್ಟು ಬೇಗನೆ ನಮ್ಮ ಕುಟುಂಬವನ್ನು ಸೇರಿಕೊಳ್ಳಬೇಕು’ ಎಂದು ಅಳಲು ತೋಡಿಕೊಂಡರು.

ಒಂದೇ ಕೋಣೆಯಲ್ಲಿ 20 ಜನ:‘ಕಾರ್ಖಾನೆಯಲ್ಲಿ 836 ಜನ ಕೆಲಸ ಮಾಡುತ್ತಿದ್ದು, ಇನ್ನೊಂದೆಡೆ 300 ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಕಾರ್ಖಾನೆ ಬಳಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೋಣೆಯಲ್ಲಿ 20 ಜನರನ್ನು ಇರಿಸಿದ್ದಾರೆ. ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬಂದ ನಂತರ ಪರಸ್ಪರ ಅಂತರ ಕಾಯ್ದುಕೊಳ್ಳಬೇಕೆಂದು ಹೇಳುತ್ತಾರೆ, ಆದರೆ ಒಂದೇ ಕೋಣೆಯಲ್ಲಿ ಇಪ್ಪತ್ತು ಜನರಿದ್ದರೆ ಅಂತರ ಕಾಯ್ದುಕೊಳ್ಳಲು ಸಾಧ್ಯವೇ?’ ಎಂದು ಕಾರ್ಮಿಕರು ಪ್ರಶ್ನಿಸಿದರು.

‘ಹೆಚ್ಚಿನ ಜನರಿಗೆ ವೇತನ ನೀಡಿಲ್ಲ. ಕೊರೊನಾ ಇರುವುದರಿಂದ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎನ್ನುತ್ತಾರೆ. ಆದರೆ ಎಲ್ಲರಿಗೂ ಮುಖಗವಸು ನೀಡಿಲ್ಲ, ಊರಿಗೆ ಹೋಗಲು ರೈಲಿನ ಪ್ರಯಾಣ ವೆಚ್ಚವನ್ನು ನಾವೇ ಭರಿಸಬೇಕಂತೆ. ಇದ್ಯಾವ ನ್ಯಾಯ? ನಮ್ಮ ಬಳಿ ಅಷ್ಟು ಹಣ ಇಲ್ಲ, ಸಂಬಳದ ಹಣ ಪ್ರಯಾಣಕ್ಕೆ ಸರಿಹೋದಲ್ಲಿ, ಮನೆಗೆ ಬರಿಗೈಯಲ್ಲಿ ಹೋಗಬೇಕಾಗುತ್ತದೆ’ ಎನ್ನುತ್ತಾರೆ ಕಾರ್ಮಿಕ ರಾಜೇಂದರ್.

ಭರವಸೆ ತುಂಬಿದ ಪೊಲೀಸರು:ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ಹೆಗಡೆ ‘ಪ್ರಯಾಣಕ್ಕೆ ಬೇಕಾದ ವ್ಯವಸ್ಥೆ ಮಾಡಲು ನೋಡಲ್‌ ಅಧಿಕಾರಿಗಳ ಜತೆ ಮಾತನಾಡಿದ್ದೇವೆ. ಊರಿಗೆ ತೆರಳಲು ಇಚ್ಛೆ ಇದ್ದವರು ಹೆಸರು ನೋಂದಾಯಿಸಿಕೊಳ್ಳಿ. ಊರಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ. ಯಾರೂ ಗಾಬರಿ ಆಗಬೇಡಿ’ ಎಂದು ಕಾರ್ಮಿಕರಿಗೆ ಧೈರ್ಯ ತುಂಬಿದರು.

ಕಾರ್ಮಿಕರು ಚಪ್ಪಾಳೆ ತಟ್ಟುವ ಮೂಲಕ ಅಧಿಕಾರಿಗೆ ವಂದನೆ ಸಲ್ಲಿಸಿದರು.

ವೆಚ್ಚ ಭರಿಸಲಾಗದು: ಬಿಎಂಆರ್‌ಸಿಎಲ್‌
‘ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲ ಕಾರ್ಮಿಕರಿಗೆ ಅಗತ್ಯ ದಿನಸಿ ಮತ್ತು ಆಹಾರ ಒದಗಿಸಿದ್ದೇವೆ. ವೈದ್ಯಕೀಯ ತಪಾಸಣೆ, ಯೋಗ, ಮನರಂಜನೆ ವ್ಯವಸ್ಥೆಯನ್ನೂ ಮಾಡಿದ್ದೇವೆ. ಎಲ್ಲರಿಗೂ ಮಾರ್ಚ್ ತಿಂಗಳ ವೇತನ ನೀಡಲಾಗಿದೆ. ಏಪ್ರಿಲ್ ವೇತನವನ್ನು ಈಗಷ್ಟೇ ನೀಡಬೇಕಿದೆ. ಹೀಗಾಗಿ ಅವರ ಪ್ರಯಾಣ ವೆಚ್ಚವನ್ನು ಅವರೇ ಭರಿಸಬೇಕು. ನಾವು ಭರಿಸಲು ಸಾಧ್ಯವಿಲ್ಲ’ ಎಂದು ಬಿಎಂಆರ್ಸಿಎಲ್‌ನ ಯೋಜನಾ ನಿರ್ದೇಶಕ ರಾಧಾಕೃಷ್ಣರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.