ADVERTISEMENT

ಹೊಸ ವರ್ಷದ ಸಂಭ್ರಮಾಚರಣೆ: ರಾತ್ರಿ 2 ಗಂಟೆ ತನಕ ಮೆಟ್ರೊ ರೈಲು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 0:28 IST
Last Updated 30 ಡಿಸೆಂಬರ್ 2022, 0:28 IST
   

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಅನುಕೂಲ ಆಗುವಂತೆ ಮೆಟ್ರೊ ರೈಲು ಸೇವೆಯನ್ನು ರಾತ್ರಿ 2 ಗಂಟೆ ತನಕ ವಿಸ್ತರಿಸಲಾಗಿದೆ.

ರಾತ್ರಿ 11.30ಕ್ಕೆ ಇದ್ದ ಕೊನೆಯ ರೈಲು ಸೇವೆಯನ್ನು ಡಿ.31ರಂದು ಬೆಳಗಿನ ಜಾವ 2 ಗಂಟೆ ತನಕ ವಿಸ್ತರಿಸಲಾಗಿದೆ. ಈ ಸಂದರ್ಭದಲ್ಲಿ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಬೈಯಪ್ಪನಹಳ್ಳಿಯಿಂದ 1.35 ಗಂಟೆಗೆ, ಕೆಂಗೇರಿಯಿಂದ 1.25ಕ್ಕೆ, ನಾಗಸಂದ್ರದಿಂದ 1.30ಕ್ಕೆ ಮತ್ತು ರೇಷ್ಮೆ ಸಂಸ್ಥೆಯಿಂದ 1.25ಕ್ಕೆ ಕೊನೆಯ ರೈಲು ಹೊರಡಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ನಾಲ್ಕೂ ಕಡೆಗೆ ಕೊನೆಯ ರೈಲುಗಳು ರಾತ್ರಿ 2 ಗಂಟೆಗೆ ಹೊರಡಲಿವೆ.

ADVERTISEMENT

ಅಂದು ರಾತ್ರಿ 11.30ರ ನಂತರ ಎಂ.ಜಿ. ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಪ್ರಯಾಣಿಸುವವರಿಗೆ ₹50 ಮೊತ್ತದ ಕಾಗದದ ಟಿಕೆಟ್ ವಿತರಿಸಲಾಗುವುದು. ಆ ಸಂದರ್ಭದಲ್ಲಿ ಈ ನಿಲ್ದಾಣಗಳಲ್ಲಿ ಟೋಕನ್ ವಿವರಣೆ ಇರುವುದಿಲ್ಲ. ಕಾಗದದ ಟಿಕೆಟ್‌ಗಳನ್ನು ಅಂದು ರಾತ್ರಿ 8 ಗಂಟೆಯಿಂದಲೇ ಎಲ್ಲಾ ಮೆಟ್ರೊ ನಿಲ್ದಾಣಗಳಲ್ಲಿ ಮುಂಚಿತವಾಗಿ ಖರೀದಿಸಲು ಅವಕಾಶ ಇದೆ.

ಸ್ಮಾರ್ಟ್‌ ಕಾರ್ಡ್ ಮತ್ತು ಕ್ಯೂಆರ್‌ ಕೋಡ್ ಟಿಕೆಟ್‌ ಹೊಂದಿರುವ ಪ್ರಯಾಣಿಕರು ಎಂದಿನಂತೆ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.