ADVERTISEMENT

ರಿಚಾರ್ಜ್‌ ಮಾಡಿಸಿದರೂ ಕಾಯುವ ಕಷ್ಟ

ನಮ್ಮ ಮೆಟ್ರೊ: ಹೊಸ ಸ್ಮಾರ್ಟ್‌ಕಾರ್ಡ್‌ ಖರೀದಿಸಬೇಕು–ಇಲ್ಲವೇ ಗಂಟೆಗಟ್ಟಲೇ ಕಾಯಬೇಕು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 18:55 IST
Last Updated 14 ಸೆಪ್ಟೆಂಬರ್ 2020, 18:55 IST

ಬೆಂಗಳೂರು: ಹಳೆಯ ಸ್ಮಾರ್ಟ್‌ಕಾರ್ಡ್‌ ಇದ್ದರೂ ನಿಲ್ದಾಣದಲ್ಲಿಯೇ ರಿಚಾರ್ಜ್‌ ಮಾಡಬಹುದಾದ ಸೌಲಭ್ಯ ಒದಗಿಸಿದ್ದ ಬೆಂಗಳೂರು ಮೆಟ್ರೊ ಅಭಿವೃದ್ಧಿ ನಿಗಮವು (ಬಿಎಂಆರ್‌ಸಿಎಲ್‌) ಸದ್ದಿಲ್ಲದೆ ಈ ಸೌಲಭ್ಯವನ್ನು ವಾಪಸ್‌ ಪಡೆದಿರುವುದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ.

‘ನಿಲ್ದಾಣದಲ್ಲಿಯೇ ಹಳೆಯ ಸ್ಮಾರ್ಟ್‌ಕಾರ್ಡ್‌ ರಿಚಾರ್ಡ್‌ ಮಾಡುವ ಅವಕಾಶವನ್ನು ನೀಡಲಾಗಿತ್ತು. ಅದರಂತೆ ಮೊದಲು ಮತ್ತು ಎರಡನೇ ದಿನ ನಾನು ನಿಲ್ದಾಣದಲ್ಲಿಯೇ ರಿಚಾರ್ಜ್‌ ಮಾಡಿಸಿದ್ದೆ. ಈಗ ಈ ಸೌಲಭ್ಯ ಇಲ್ಲ. ನಿಗಮದ ಆ್ಯಪ್‌ ಮತ್ತು ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ರಿಚಾರ್ಜ್ ಮಾಡಿಸಿಕೊಂಡರೂ, ರೈಲಿನಲ್ಲಿ ಪ್ರಯಾಣಿಸಲು ಒಂದು ತಾಸು ಕಾಯಬೇಕು’ ಎಂದು ಪ್ರಯಾಣಿಕ ರಮೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರತಿ ಬಾರಿಯೂ ಹೊಸದಾಗಿ ಸ್ಮಾರ್ಟ್‌ಕಾರ್ಡ್‌ ಖರೀದಿಸಬೇಕಾದ ಅನಿವಾರ್ಯತೆಯನ್ನು ನಿಗಮ ಸೃಷ್ಟಿಸುವಂತೆ ಕಾಣಿಸುತ್ತಿದೆ. ಕಾರ್ಡ್‌ ಖರೀದಿಸಲು ₹50, ಕನಿಷ್ಠ ದರ ₹50 ಸೇರಿದಂತೆ ₹100ಕ್ಕೂ ಹೆಚ್ಚು ಮೊತ್ತ ಇಟ್ಟುಕೊಂಡಿರಬೇಕಾಗುತ್ತದೆ. ಒಮ್ಮೆಗೆ ಕನಿಷ್ಠ ₹200 ಆದರೂ ರಿಚಾರ್ಜ್ ಮಾಡಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

‘ನಿಗಮದ ಆ್ಯಪ್‌ನಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದು ಎನ್ನುತ್ತಾರೆ. ಆದರೆ, ನಾಗರಿಕರಿಗೆ ಇರಲಿ, ನಿಗಮದ ಸಿಬ್ಬಂದಿಗೇ ಅದರ ಬಗ್ಗೆ ಮಾಹಿತಿ ಇಲ್ಲ. ಪ್ರಯಾಣದ ಅವಧಿಗಿಂತ, ಕಾಯುವ ಅವಧಿಯೇ ದುಪ್ಪಟ್ಟಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಮೊದಲು ರೂಪಿಸಿದ್ದ ಮಾರ್ಗಸೂಚಿಯಂತೆ, ಆನ್‌ಲೈನ್‌ನಲ್ಲಿ ಅಥವಾ ಯುಪಿಐ ಮೂಲಕ ರಿಚಾರ್ಜ್‌ಗೆ ಅವಕಾಶವಿತ್ತು. ಮೊದಲ ಒಂದೆರಡು ದಿನ ನಿಲ್ದಾಣದಲ್ಲಿಯೇ ರಿಚಾರ್ಜ್ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ದಟ್ಟಣೆ ಹೆಚ್ಚಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಈ ಸೌಲಭ್ಯವನ್ನು ಹಿಂಪಡೆಯಲಾಗಿದೆ. ಈಗ, ಪ್ರಯಾಣಕ್ಕೂ ಒಂದು ಗಂಟೆ ಮೊದಲೇ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಕೊಳ್ಳಬೇಕು’ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.