ಬೆಂಗಳೂರು: ‘ನಮ್ಮ ಮೆಟ್ರೊ ಹಳದಿ ಮಾರ್ಗ ಉದ್ಘಾಟನೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಹಾಗೂ ನಾನು ಮನವಿ ಮಾಡಿದ್ದೆವು. ಈ ವಿಷಯದಲ್ಲಿ ಜನರ ಸೇವೆ ಮುಖ್ಯವೇ ಹೊರತು ಕ್ರೆಡಿಟ್ ರಾಜಕಾರಣವಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಆರ್.ವಿ. ರಸ್ತೆ ನಿಲ್ದಾಣದಿಂದ ಬೊಮ್ಮಸಂದ್ರದವರೆಗೆ ಮಂಗಳವಾರ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಪ್ರಧಾನಿಯವರು ನಮ್ಮ ಆಹ್ವಾನಕ್ಕೆ ಸ್ಪಂದಿಸಿ ಸಮಯ ನೀಡಿದ್ದು, ಐಐಎಂಬಿಯಲ್ಲಿನ ಸಭಾಂಗಣದಲ್ಲಿ ಆಗಸ್ಟ್ 10ರಂದು ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ₹7,610 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 19.15 ಕಿಲೋಮೀಟರ್ ಉದ್ದದ ಮೆಟ್ರೊ ಹಳದಿ ಮಾರ್ಗ 16 ನಿಲ್ದಾಣಗಳನ್ನು ಹೊಂದಿದೆ. ಪ್ರಾರಂಭದಲ್ಲಿ 25 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ’ ಎಂದು ಮಾಹಿತಿ ನೀಡಿದರು.
‘ಮೆಟ್ರೊ ರೈಲಿನಲ್ಲಿ ಪ್ರಧಾನಿ, ಮುಖ್ಯಮಂತ್ರಿ, ಸ್ಥಳೀಯ ಶಾಸಕರು ಅಂದು ಪ್ರಯಾಣ ಮಾಡಲಿದ್ದಾರೆ. ಡಬಲ್ ಡೆಕರ್ ಯೋಜನೆ ಭೂಸ್ವಾಧೀನಕ್ಕೆ ಒಂದಷ್ಟು ಅನುದಾನದ ಕೊರತೆಯಿದೆ. ಈ ಬಗ್ಗೆ ಪ್ರಧಾನಿಗೆ ಮನವಿ ಸಲ್ಲಿಸಲಾಗುವುದು’ ಎಂದರು.
‘ಮೆಟ್ರೊ ಕೇವಲ ಕೇಂದ್ರ ಸರ್ಕಾರದ ಯೋಜನೆಯಲ್ಲ. ಇದರಲ್ಲಿ ರಾಜ್ಯದ ಪಾಲುದಾರಿಕೆಯೂ ಇದೆ. ಅವರ ಕಡೆಯಿಂದ ಅಧ್ಯಕ್ಷರಿದ್ದರೆ, ನಮ್ಮ ಕಡೆಯಿಂದ ವ್ಯವಸ್ಥಾಪಕ ನಿರ್ದೇಶಕರು ಇರುತ್ತಾರೆ. ಇಲ್ಲಿ ಯಾರಿಗೂ ಕಿವಿ ಮೇಲೆ ಹೂ ಇಲ್ಲ. ನಾವು ಜನರ ಸೇವೆ ಮಾಡುತ್ತಿದ್ದೇವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು, ನಮ್ಮ ಜವಾಬ್ದಾರಿ ನಿರ್ವಹಣೆ ಮಾಡಿದ್ದೇವೆ. ಎಲ್ಲದರಲ್ಲೂ ತಪ್ಪು ಹುಡುಕಿ, ಗಲಾಟೆ ಮಾಡುವ ಸಂಸದರು ಅನುದಾನ ಕೊಡಿಸಲಿ. ಒಬ್ಬರೂ ಅನುದಾನದ ಬಗ್ಗೆ ಮಾತನಾಡುವುದಿಲ್ಲ. ಬರೀ ತಪ್ಪು ಕಂಡುಹಿಡಿದು ಮಾತನಾಡುತ್ತಾರೆ’ ಎಂದು ಹೇಳಿದರು.
‘ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಹೀಗಾಗಿ ಅನನುಭವಿಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹಳದಿ ಮಾರ್ಗದಲ್ಲಿ ಕಾರ್ಯಾಚರಣೆಗೆ ಜುಲೈ 31ರಂದು ಪ್ರಮಾಣಪತ್ರ ಲಭಿಸಿದೆ. ತೇಜಸ್ವಿ ಸೂರ್ಯ ಆತುರದಲ್ಲಿರುವ ಹುಡುಗ, ಅನುಭವವಿಲ್ಲ. ಈ ಕೆಲಸಗಳನ್ನು ಆತುರದಲ್ಲಿ ಮಾಡಲು ಆಗುವುದಿಲ್ಲ’ ಎಂದರು.
ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್, ಬಿಡಿಎ ಅಧ್ಯಕ್ಷ ಹ್ಯಾರಿಸ್, ಶಾಸಕರಾದ ಎಂ. ಕೃಷ್ಣಪ್ಪ, ಸಿ.ಕೆ. ರಾಮಮೂರ್ತಿ, ಸತೀಶ್ ರೆಡ್ಡಿ ಉಪಸ್ಥಿತರಿದ್ದರು.
‘ಹೆಬ್ಬಾಳ ಜಂಕ್ಷನ್‌ನಲ್ಲಿ ಹೊಸ ಸುರಂಗ ರಸ್ತೆ’
‘ಹೆಬ್ಬಾಳ– ನಾಗವಾರ ಕಡೆಯಿಂದ ಎಸ್ಟೀಮ್ ಮಾಲ್‌ನಿಂದ ಕೃಷಿ ವಿಶ್ವವಿದ್ಯಾಲಯವರೆಗೆ 1.5 ಕಿ.ಮೀ. ಸುರಂಗ ರಸ್ತೆಯನ್ನು ನಿರ್ಮಿಸಲಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‘ಈ ಯೋಜನೆ ಸಚಿವ ಸಂಪುಟದ ಮುಂದೆ ಬರಲಿದೆ. ಮುಖ್ಯ ಸುರಂಗ ರಸ್ತೆ ಬೇರೆ ಈ ಹೊಸ ಸುರಂಗ ರಸ್ತೆ ಬೇರೆ. ಇದನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಬೇಕು ಎಂದು ಬಿ–ಸ್ಮೈಲ್ ಎಂಜಿನಿಯರ್‌ಗಳಿಗೆ ತಿಳಿಸಲಾಗಿದೆ’ ಎಂದರು. ‘ಹೆಬ್ಬಾಳ ಜಂಕ್ಷನ್‌ನಲ್ಲಿ ಕೆ.ಆರ್. ಪುರದಿಂದ ಮೇಖ್ರಿ ವೃತ್ತದ ಕಡೆಗಿನ ಮೇಲ್ಸೇತುವೆಯನ್ನು ಆಗಸ್ಟ್ 15ರೊಳಗೆ ಮುಖ್ಯಮಂತ್ರಿಯವರು ಉದ್ಘಾಟಿಸಲಿದ್ದಾರೆ. ಆ ನಂತರ ಇನ್ನೊಂದು ಭಾಗದ ಮೇಲ್ಸೇತುವೆ ನಿರ್ಮಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.