ADVERTISEMENT

ಬೆಂಗಳೂರು| ಎಂ.ಜಿ ರಸ್ತೆಯ ಬೊಲೆವಾರ್ಡ್‌ ಬಳಿ ಹಾಕಿದ್ದ ತ್ಯಾಜ್ಯಕ್ಕೆ ಬೆಂಕಿ: ಆತಂಕ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 15:47 IST
Last Updated 28 ಜನವರಿ 2026, 15:47 IST
ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿನ ಜನರಲ್‌ ಕಾರ್ಯಪ್ಪ ಸ್ಮಾರಕ ಉದ್ಯಾನದ ಬಳಿ ಬುಧವಾರ ಮಧ್ಯಾಹ್ನ ಕಾಣಿಸಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ಹಾಗೂ ತುರ್ತು ಸೇವಾ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಂದಿಸಿದರು 
ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿನ ಜನರಲ್‌ ಕಾರ್ಯಪ್ಪ ಸ್ಮಾರಕ ಉದ್ಯಾನದ ಬಳಿ ಬುಧವಾರ ಮಧ್ಯಾಹ್ನ ಕಾಣಿಸಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ಹಾಗೂ ತುರ್ತು ಸೇವಾ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಂದಿಸಿದರು    

ಬೆಂಗಳೂರು: ಮಹಾತ್ಮ ಗಾಂಧಿ ರಸ್ತೆಯ ಮೆಟ್ರೊ ನಿಲ್ದಾಣದ ಬೊಲೆವಾರ್ಡ್‌ ಬಳಿ ಸುರಿಯಲಾಗಿದ್ದ ತ್ಯಾಜ್ಯಕ್ಕೆ ಬುಧವಾರ ಮಧ್ಯಾಹ್ನ ಬೆಂಕಿ ಬಿದ್ದು ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.

ಬೆಂಕಿ ಬಿದ್ದಿರುವ ಮಾಹಿತಿ ತಿಳಿದ ಕೂಡಲೇ ಎಚ್ಚೆತ್ತ ಮೆಟ್ರೊ ಸಿಬ್ಬಂದಿ, ಅಗ್ನಿಶಾಮಕ ಹಾಗೂ ತುರ್ತು ಸೇವಾ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅಶೋಕನಗರದಲ್ಲಿರುವ ಅಗ್ನಿಶಾಮಕ ಹಾಗೂ ತುರ್ತು ಸೇವಾ ದಳದ ಘಟಕದಿಂದ ವಾಹನದಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಮೆಟ್ರೊ ಸಿಬ್ಬಂದಿಯೂ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಕೈಜೋಡಿಸಿದರು.

ಫೀಲ್ಡ್‌ ಮಾರ್ಷಲ್‌ ಮಾಣೆಕ್‌ಷಾ ಪರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆದ ವೇಳೆ ಬಿದ್ದಿದ್ದ ತ್ಯಾಜ್ಯವನ್ನು ಮಾಣೆಕ್‌ ಷಾ ಸ್ಮಾರಕ ಉದ್ಯಾನದ ಸುತ್ತಲಿನ ಕಾಂಪೌಂಡ್‌ ಬಳಿ ಹಾಕಲಾಗಿತ್ತು. ಕಾಗದ, ಪ್ಲಾಸ್ಟಿಕ್‌ ತ್ಯಾಜ್ಯದ ಜೊತೆಗೆ, ಉದುರಿದ ಎಲೆಗಳೂ ಸೇರಿದ್ದು, ಅದಕ್ಕೆ ಬೆಂಕಿ ತಗುಲಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಮಹಾತ್ಮ ಗಾಂಧಿ ರಸ್ತೆಯ ಸುತ್ತಮುತ್ತ ದಟ್ಟ ಹೊಗೆ ಆವರಿಸಿತ್ತು.

ADVERTISEMENT

‘ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಬೆಂಕಿ ಜೋರಾಗಿ ಉರಿಯುತ್ತಿರುವುದನ್ನು ಗಮನಿಸಿದ್ದೆವು. ಬಳಿಕ ನಾವೇ ಬೆಂಕಿ ನಂದಿಸಲು ಪ್ರಯತ್ನಿಸಿದ್ದೆವು. ಜೋರಾಗಿ ಗಾಳಿ ಬೀಸುತ್ತಿದ್ದರಿಂದ ಬೆಂಕಿ ವ್ಯಾಪಿಸುತ್ತಲೇ ಸಾಗಿತು. ನಂತರ, ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದರು’ ಎಂದು ‘ನಮ್ಮ ಮೆಟ್ರೊ’ ನಿಗಮದ ನಿರ್ವಹಣಾ ಸಿಬ್ಬಂದಿ ಹೇಳಿದರು.

ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿನ ಜನರಲ್‌ ಕಾರ್ಯಪ್ಪ ಸ್ಮಾರಕ ಉದ್ಯಾನದ ಬಳಿ ಬುಧವಾರ ಮಧ್ಯಾಹ್ನ ಕಾಣಿಸಿಕೊಂಡಿದ್ದ ಬೆಂಕಿ 

ಬೆಂಕಿ ಬಿದ್ದ ಸ್ಥಳದ ಪಕ್ಕದಲ್ಲಿಯೇ ಮೆಟ್ರೊ ನಿಲ್ದಾಣ ಇದೆ. ಮೆಟ್ರೊ ಹಳಿಯೂ ಹಾದು ಹೋಗಿದೆ. ಎಂ.ಜಿ. ರಸ್ತೆಯೂ ಜನನಿಬಿಡ ತಾಣವಾಗಿರುವುದರಿಂದ ಈ ಘಟನೆ ಆತಂಕಕ್ಕೆ ಕಾರಣವಾಯಿತು. ಮುಂದಿನ ದಿನಗಳಲ್ಲಿ ರೀತಿಯ ಘಟನೆ ಆಗದಂತೆ ಎಚ್ಚರ ವಹಿಸಬೇಕು. ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ಪ್ರಯಾಣಿಕರ ರಮೇಶ್‌ ಆಗ್ರಹಿಸಿದರು.

‘ಬೊಲೆವಾರ್ಡ್‌ನಲ್ಲಿ ತೆರಳುತ್ತಿದ್ದವರು ಅಥವಾ ಉದ್ಯಾನದಲ್ಲಿ ಇದ್ದವರು ಸಿಗರೇಟ್‌ ಸೇದಿ ಅದರ ತುಂಡನ್ನು ಎಸೆದಿರುವ ಸಾಧ್ಯತೆಯಿದೆ. ಅದರಿಂದ ಬೆಂಕಿ ಕಾಣಿಸಿಕೊಂಡಿರಬಹುದು. ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಅಗ್ನಿಶಾಮಕ ಹಾಗೂ ತುರ್ತುಸೇವಾ ದಳದ ಸಿಬ್ಬಂದಿ ಹೇಳಿದರು.

 ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿನ ಜನರಲ್‌ ಕಾರ್ಯಪ್ಪ ಸ್ಮಾರಕ ಉದ್ಯಾನದ ಬಳಿ ಬುಧವಾರ ಮಧ್ಯಾಹ್ನ ಕಾಣಿಸಿಕೊಂಡಿದ್ದ ಬೆಂಕಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.