ADVERTISEMENT

ಹುದ್ದೆಗಾಗಿ ಅಲ್ಲ, ಗೌರವಕ್ಕಾಗಿ ಕಾನೂನು ಹೋರಾಟ: ಅಲೋಕ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 8:38 IST
Last Updated 6 ಆಗಸ್ಟ್ 2019, 8:38 IST
   

ಬೆಂಗಳೂರು: ‘ನಾನು ಕಾನೂನು ಹೋರಾಟ ಮಾಡುತ್ತಿರುವುದು, ಹುದ್ದೆಗಾಗಿ ಅಲ್ಲ, ಗೌರವ ಮತ್ತು ಘನತೆ'ಗಾಗಿ ಎಂದು 47 ದಿನ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಕೆಲಸ ಮಾಡಿ, ವರ್ಗಾವಣೆಗೊಂಡಿರುವ ಹಿರಿಯ ಪೊಲೀಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಕಳೆದ ಶುಕ್ರವಾರ ಸಂಜೆ ಅಲೋಕ್‌ ಕುಮಾರ್‌ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ದೂರಿನ ಅರ್ಜಿಗಳನ್ನು ಪರಿಶೀಲನೆ ಮಾಡುತ್ತಿರುವಾಗಲೇ ಸುದ್ದಿವಾಹಿನಿಗಳು ಅಲೋಕ್‌ ಕುಮಾರ್‌ ವರ್ಗಾವಣೆಯ ಸುದ್ದಿಯನ್ನು ಪ್ರಸಾರ ಮಾಡಿದ್ದವು.

ರಾಜ್ಯ ಸರ್ಕಾರದ ಈ ಹಠಾತ್‌ ವರ್ಗಾವಣೆ ಆದೇಶ ನನಗೆ ಆಶ್ಚರ್ಯ ತರುವುದರ ಜತೆಗೆ ಮುಜುಗರ ಮತ್ತು ಆಘಾತವನ್ನು ಉಂಟುಮಾಡಿತು ಎಂದು ಅಲೋಕ್‌ ಕುಮಾರ್ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ವರ್ಗಾವಣೆ ಬಗ್ಗೆ ಅಧಿಕೃತ ಮಾಹಿತಿ ಬರಬಹುದು ಎಂದು ಅಂದು ಸಂಜೆ 5.45ರವರೆಗೂ ಕಚೇರಿಯಲ್ಲಿ ಕಾದು ಕುಳಿತಿದ್ದೆ. ಆದರೆ ಯಾವುದೇ ಮಾಹಿತಿ ಬರಲಿಲ್ಲವಾದ್ದರಿಂದ ನಿವಾಸಕ್ಕೆ ತೆರಳಿದೆ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.

ನನ್ನ ವರ್ಗಾವಣೆ ಮಾಡಿರುವ ಸರ್ಕಾರಕ್ಕೆ ನನ್ನ ಬಗ್ಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ, ನಾನು ಯಾವುದೇ ವ್ಯಕ್ತಿ ಅಥವಾ ಸರ್ಕಾರವನ್ನು ವಿರೋಧ ಮಾಡಿಲ್ಲ. ನನ್ನ ವರ್ಗಾವಣೆಗೆ ಬಗ್ಗೆ ಈಗಿನ ಸರ್ಕಾರದ ಮೇಲೆ ಯಾರು ಒತ್ತಡ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ನನ್ನ ವರ್ಗಾವಣೆ ಹಿಂದೆ ಅಕ್ರಮ ಮೀಟರ್‌ ಬಡ್ಡಿದಂಧೆಗಳು, ಅಕ್ರಮ ಕ್ಲಬ್‌ಗಳು, ಲೈವ್‌ ಬ್ಯಾಂಡ್‌ಗಳು, ಅಕ್ರಮ ಬಿಲ್ಡರ್‌ ಮಾಫಿಯಾಗಳ ಕೆಲ ಜನರು ಪೊಲೀಸ್‌ ಇಲಾಖೆಯವರ ಜೊತೆಗೆ ಕೈಜೋಡಿಸಿ ಸರ್ಕಾರದ ಮೇಲೆ ಒತ್ತಡ ಹೇರಿ ವರ್ಗಾವಣೆ ಮಾಡಿಸಿರಬಹುದು ಎಂದು ಅಲೋಕ್‌ ಕುಮಾರ್‌ ಶಂಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.