ಬೆಂಗಳೂರು: ಬೇಸಿಗೆಯಲ್ಲೂ ಕರ್ನಾಟಕ ಹಾಲು ಮಹಾಮಂಡಳದಲ್ಲಿ (ಕೆಎಂಎಫ್) ಹಾಲು ಸಂಗ್ರಹದ ಪ್ರಮಾಣ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇಕಡ 9ರಿಂದ ಶೇಕಡ 12ರಷ್ಟು ಹೆಚ್ಚಳವಾಗಿದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಸಿರು ಮೇವಿನ ಕೊರತೆ, ತಾಪಮಾನದ ಕಾರಣಗಳಿಂದ ಹಾಲಿನ ಇಳುವರಿ ಕಡಿಮೆ ಆಗುತ್ತದೆ. ರೈತರು ಡೇರಿಗಳಿಗೆ ಹಾಕುವ ಹಾಲಿನ ಪ್ರಮಾಣವೂ ಸಹಜವಾಗಿಯೇ ಕಡಿಮೆಯಾಗುತ್ತದೆ. ಆದರೆ, ಈ ಬಾರಿ, ಹಾಲಿನ ಪ್ರಮಾಣ ಇಳಿಯುವ ಬದಲು, ತುಸು ಏರಿಕೆ ಕಂಡಿದೆ.
ರಾಜ್ಯದಲ್ಲಿ ಕೆಎಂಎಫ್ ವ್ಯಾಪ್ತಿಯಲ್ಲಿ 16 ಜಿಲ್ಲಾ ಹಾಲು ಒಕ್ಕೂಟ ಗಳಿವೆ. 15,840 ಡೇರಿಗಳಿವೆ. 26.89 ಲಕ್ಷ ರೈತರು ಹಾಲು ಪೂರೈಸು ತ್ತಾರೆ. ಪ್ರತಿವರ್ಷ ಬೇಸಿಗೆಯಲ್ಲಿ ಹಾಲಿನ ಸಂಗ್ರಹ ಪ್ರಮಾಣ 80 ಲಕ್ಷ ಲೀಟರ್ ದಾಟುವುದಿಲ್ಲ. ಕಳೆದ ವರ್ಷ 80.50 ಲಕ್ಷ ಲೀಟರ್ ಸಂಗ್ರಹವಾಗಿತ್ತು. ಆದರೆ, ಈ ವರ್ಷ ಸರಾಸರಿ ಹಾಲು ಸಂಗ್ರಹದ ಪ್ರಮಾಣ 87.63 ಲಕ್ಷ ಲೀಟರ್ ದಾಟಿದೆ. ಏಪ್ರಿಲ್ 23ರ ಒಂದೇ ದಿನ ಹಾಲು 91.73 ಲಕ್ಷ ಲೀಟರ್ ಹಾಲು ಸಂಗ್ರಹವಾಗಿದೆ.
ಲಭ್ಯವಿರುವ ದಾಖಲೆಗಳ ಪ್ರಕಾರ, ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಳೆದ ವರ್ಷ ಬೇಸಿಗೆ ಅವಧಿಯಲ್ಲಿ ನಿತ್ಯ 2.30 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಈ ವರ್ಷ 2.44 ಲಕ್ಷ ಲೀಟರ್‌ನಷ್ಟು ಸಂಗ್ರಹವಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಬಾರಿ 1.60 ಲಕ್ಷ ಲೀಟರ್ ಸಂಗ್ರಹವಾಗುತ್ತಿತ್ತು. ಈ ವರ್ಷ 1.91 ಲಕ್ಷ ಲೀಟರ್‌ಗೆ ಹೆಚ್ಚಿದೆ. ಬೆಳಗಾವಿಯ ಬೆಮುಲ್ ಒಕ್ಕೂಟದಲ್ಲಿ ಕಳೆದ ವರ್ಷ1.80 ಲಕ್ಷ ಲೀಟರ್ ಸಂಗ್ರಹವಾಗುತ್ತಿತ್ತು. ಈ ವರ್ಷ 2.11 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ ಎಂದು ಒಕ್ಕೂಟದ ಮೂಲಗಳು ತಿಳಿಸಿವೆ.
‘ಏಪ್ರಿಲ್ 1ರಿಂದ ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ ₹ 4ರಷ್ಟು ಹೆಚ್ಚಿಸಲಾಗಿದೆ. ಆ ಬಳಿಕ ಹಾಲು ಪೂರೈಕೆ ಯಲ್ಲಿ ಹೆಚ್ಚಳವಾಗಿದೆ’ ಎನ್ನುತ್ತಾರೆ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷ ಭೀಮಾನಾಯ್ಕ.
ಈ ಬಾರಿ ರಾಜ್ಯದ ಬಹುತೇಕ ಕಡೆ ಪೂರ್ವ ಮುಂಗಾರು ಉತ್ತಮವಾಗಿದೆ. ಫೆಬ್ರುವರಿ ತಿಂಗಳಿನಿಂದಲೂ ರಾಜ್ಯದ ಕೆಲವೆಡೆ ಆಗಾಗ ಮಳೆಯಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಂಕಿ–ಅಂಶಗಳು ಹೇಳುತ್ತಿವೆ. ‘ಸ್ವಲ್ಪ ಮಳೆಯಾಗಿದ್ದರಿಂದ, ಅಲ್ಲಲ್ಲಿ ಹಸಿರು ಮೇವು ಲಭ್ಯವಾಗಿದೆ. ವಾತಾವರಣವೂ ರಾಸುಗಳಿಗೆ ಪೂರಕವಾಗಿದೆ. ಹೀಗಾಗಿ, ಹಾಲಿನ ಇಳುವರಿ ಕಡಿಮೆಯಾಗಿಲ್ಲ’ ಎಂಬುದು ಹೈನುಗಾರರೊಬ್ಬರ ಅಭಿಪ್ರಾಯವಾಗಿದೆ.
ಇದೇ ರೀತಿ ಮಳೆ ಮುಂದುವರಿದರೆ ಮುಂದಿನ ದಿನಗಳಲ್ಲಿ ನಿತ್ಯದ ಹಾಲಿನ ಸಂಗ್ರಹಣೆ ಪ್ರಮಾಣ 1.25 ಕೋಟಿ ಲೀಟರ್ ದಾಟುವ ವಿಶ್ವಾಸವಿದೆಭೀಮಾನಾಯ್ಕ ಅಧ್ಯಕ್ಷ ಕೆಎಂಎಫ್
ಬೇಸಿಗೆಯಲ್ಲಿ ಸಂಗ್ರಹವಾಗುವ ಹಾಲಿನ ಪ್ರಮಾಣ(ಸರಾಸರಿ) 80.50 ಲಕ್ಷ.ಲೀ 2024 87.63 ಲಕ್ಷ. ಲೀ 2025
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.