ADVERTISEMENT

ಶ್ರೀಕೃಷ್ಣ ಜಯಂತಿಯಂದೇ ಗೋಪಾಲಕರ ಪ್ರತಿಭಟನೆ

ಶಿವರಾಮ ಕಾರಂತ ಬಡಾವಣೆ: ಜಮೀನು ಸ್ವಾಧೀನಕ್ಕೆ ರಾಮಗೊಂಡನಹಳ್ಳಿಯ ರೈತರ ವಿರೋಧ * ಹಸು–ಕರುಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 8:26 IST
Last Updated 30 ಆಗಸ್ಟ್ 2021, 8:26 IST
ರಾಮಗೊಂಡನಹಳ್ಳಿಯಲ್ಲಿ ಪ್ರತಿಭಟನೆಯಲ್ಲಿ ಮೆರವಣಿಗೆಯಲ್ಲಿ ಸಾಗಿದ ಗೋವುಗಳು
ರಾಮಗೊಂಡನಹಳ್ಳಿಯಲ್ಲಿ ಪ್ರತಿಭಟನೆಯಲ್ಲಿ ಮೆರವಣಿಗೆಯಲ್ಲಿ ಸಾಗಿದ ಗೋವುಗಳು   

ಬೆಂಗಳೂರು: ‘ಗೋರಕ್ಷಕ ಸರ್ಕಾರವೇ ನಮ್ಮನ್ನು ರಕ್ಷಿಸು... ಅಧಿಕಾರಿಗಳೇ ನಮ್ಮ ಹಾಲಿನ ಋಣವನ್ನು ಸ್ಮರಿಸಿ... ನಮ್ಮ ಪಾಲಕರೊಂದಿಗೆ ನಮ್ಮನ್ನು ಬದುಕಲು ಬಿಡಿ... ’

ಈ ರೀತಿ ಒಕ್ಕಣೆ ಇರುವ ಫಲಕಗಳನ್ನು ಕತ್ತಿನಲ್ಲಿ ತೂಗುಹಾಕಿಕೊಂಡಿದ್ದ ನೂರಾರು ದನ–ಕರುಗಳು ತಮ್ಮ ಸಾಕುತ್ತಿರುವ ರೈತರೊಂದಿಗೆ ರಾಮಗೊಂಡನಹಳ್ಳಿಯಲ್ಲಿ ಸೋಮವಾರ ಮೆರವಣಿಗೆಯಲ್ಲಿ ಸಾಗಿದವು. ಯಲಹಂಕ ಬಳಿಯ ರಾಮಗೊಂಡನಹಳ್ಳಿ ಗ್ರಾಮದ ರೈತರು ಶ್ರೀಕೃಷ್ಣ ಜನ್ಮಾಷ್ಟಮಿಯಂದೇ ಹಸು–ಕರುಗಳ ಮೆರವಣಿಗೆ ನಡೆಸುವ ಮೂಲಕ ಶಿವರಾಮ ಕಾರಂತ ಬಡಾವಣೆಗೆ ತಮ್ಮ ಜಮೀನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು.

ರಾಮಗೊಂಡನಹಳ್ಳಿಯಿಂದ ಹೊರಟ ಮೆರವಣಿಗೆ ಸುಮಾರು 4 ಕಿ.ಮೀ ವರೆಗೆ ಸಾಗಿತ್ತು. ಪುಟ್ಟೇನಹಳ್ಳಿಯ ಬಳಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಉಪ ತಹಸೀಲ್ದಾರ್‌ ಹಾಗೂ ಬಿಡಿಎ ಅಧಿಕಾರಿಗಳು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ADVERTISEMENT

ಬಿಡಿಎ ಈ ಬಡಾವಣೆಗೆ 252 ಎಕರೆ 4 ಗುಂಟೆ ಜಾಗವನ್ನು ರಾಮಗೊಂಡನಹಳ್ಳಿ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿದೆ. ಈ ಗ್ರಾಮದಲ್ಲಿ ರೈತರು ಹಾಗೂ ರೈತ ಕಾರ್ಮಿಕರ 800ಕ್ಕೂ ಕುಟುಂಬಗಳು ಗ್ರಾಮದಲ್ಲಿ ನೆಲೆಸಿವೆ.

‘ಈ ಬಡಾವಣೆ ನಿರ್ಮಿಸಿದ್ದೇ ಆದರೆ 17 ಗ್ರಾಮಗಳ ರೈತರು ಮತ್ತು ಕೃಷಿ ಕಾರ್ಮಿಕರು ನಿರುದ್ಯೋಗಿಗಳಾಗಲಿದ್ದಾರೆ. ಅವರ ಬದುಕು ಬೀದಿಗೆ ಬರಲಿದೆ. ಹಿಂದುತ್ವ ಹಾಗೂ ಗೋರಕ್ಷಣೆಗೆ ಆದ್ಯತೆ ಕೊಡುವ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಈ 17 ಗ್ರಾಮಗಳ ಹಿಂದೂ ಕುಟುಂಬಗಳು ನೂರಾರು ವರ್ಷಗಳಿಂದ ಪೋಷಿಸಿಕೊಂಡು ಬಂದಿರುವ 3ಸಾವಿರಕ್ಕೂ ಅಧಿಕ ಗೋವುಗಳನ್ನು ಹಾಗೂ 5 ಸಾವಿರಕ್ಕೂಅಧಿಕ ಕುರಿಗಳು ಮತ್ತು ಮೇಕೆಗಳನ್ನು ಸರಂಕ್ಷಿಸುವ ಜವಾಬ್ದಾರಿಯನ್ನು ನೆನಪಿಸಲು ಗೋವುಗಳ ಮೆರವಣಿಗೆ ನಡೆಸಿದ್ದೇವೆ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ಬೆಂಗಳೂರು ನಗರ ಜಿಲ್ಲಾ ಸಮಿತಿಯ ಸಂಯೋಜಕ ಎಂ.ರಮೇಶ್‌ ತಿಳಿಸಿದರು.

‘ರಾಮಗೊಂಡನಹಳ್ಳಿ ಗ್ರಾಮದಲ್ಲಿ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಗ್ರಾಮದಲ್ಲಿ 417 ಹಸುಗಳು 81, ಎಮ್ಮೆಗಳು ಹಾಗೂ ಸಾವಿರಾರು ಕುರಿ–ಮೇಕೆಗಳಿವೆ. ಇವುಗಳನ್ನು ಸಾಕುವುದೆಲ್ಲಿ. ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇಲ್ಲಿನ ರೈತರು ತಿಂಗಳಿಗೆ ₹ 12 ಲಕ್ಷಕ್ಕೂ ಅಧಿಕ ಮೌಲ್ಯದ ಹಾಲನ್ನು ಪೂರೈಸುತ್ತಿದ್ದಾರೆ. ಅವರ ಬದುಕು ಏನಾಗಬೇಕು’ ಎಂದು ಪ್ರಶ್ನಿಸಿದರು.

‘17 ಗ್ರಾಮಗಳಲ್ಲಿ ರೈತರ ಜಮೀನುಗಳನ್ನು ಬಡಾವಣೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇಲ್ಲಿನ ರೈತರು ಇದರ ವಿರುದ್ಧ ನಿರಂತರವಾಗಿ ಪ್ರತಿಬಟನೆ ನಡೆಸುತ್ತಲೇ ಬಂದಿದ್ದಾರೆ. ಇಲ್ಲಿನ ರೈತರ ಆರ್ಥಿಕ ಹಾಗೂ ಸಮಾಜಿಕ ಪರಿಸ್ಥಿತಿ ಅವಲೋಕಿಸಿ ಬಿಡಿಎ ಹಾಗೂ ಸರ್ಕಾರ ನಿರ್ಧಾರಕ್ಕೆ ಬರುತ್ತದೆ ಎಂಬ ಆಶಾಭಾವನೆ ಇಟ್ಟುಕೊಂಡಿದ್ದೆವು. ಆದರೆ ಈ ಬಗ್ಗೆ ಬೆಳಕು ಚೆಲ್ಲದೆಯೇ ವಾಮಮಾರ್ಗದಲ್ಲಿ ರೈತರ ಜಮೀನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇತ್ತೀಚೆಗೆ ಬೆಟ್ಟಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರ 8 ಮನೆಗಳನ್ನು ಹಾಗೂ ಗಾಣಿಗರಹಳ್ಳಿಯಲ್ಲಿ 20ಕ್ಕೂ ಅಧೀಕ ಮನೆಗಳನ್ನು ಕೆಡವಲಾಗಿದೆ. ಈ ದೌರ್ಜನ್ಯ ಒಪ್ಪಲಾಗದು’ ಎಂದರು.

‘ಬಿಡಿಎ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಗ್ರಾಮಗಳ ಮನೆಗಳಿಗೆ ಸ್ಥಳೀಯ ಸಂಸ್ಥೆಗಳ ರಸ್ತೆ, ಕುಡಿಯುವ ನೀರು ಮೊದಲಾದ ಮೂಲಸೌಕರ್ಯ ಒದಗಿಸಿವೆ. ಕನಿಷ್ಠ ಪಕ್ಷ ವಸತಿ ನಿರ್ಮಿಸಿಕೊಂಡವರನ್ನು ಒಕ್ಕೆಲಬ್ಬಿಸಬಾರದು. ಕನಿಷ್ಠ ಪಕ್ಷ ಈ ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗಾದರೂ ಈ ಯೋಜನೆಯನ್ನು ತಡೆಹಿಡಿಯಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಉಪತಹಸೀಲ್ದಾರ್‌ ರಮೇಶ್‌ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಬಿಡಿಎ ಅಧಿಕಾರಿ ನಿಕಿತಾ ಅವರೂ ನಮ್ಮಿಂದ ಮನವಿ ಸ್ವೀಕರಿಸಿದ್ದಾರೆ. ಬಿಡಿಎ ಹಾಗೂ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಎಂದು ನೋಡಿಕೊಂಡು ಮುಂದಿನ ಪ್ರತಿಭಟನೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದರು.

ಮುಖಂಡರಾದ ಶ್ರೀನಿವಾಸ್‌, ಮುನಿರಾಜು ಹಾಗೂ ಬಿ.ಆರ್‌.ನಂಜುಂಡಪ್ಪ ಪ್ರತಿಭಟನೆಯ ನೇತೃತ್ವದ ವಹಿಸಿದ್ದರು.

ಅಂಕಿ ಅಂಶ

17: ಗ್ರಾಮಗಳಲ್ಲಿ ಶಿವರಾಮ ಕಾರಂತ ಬಡಾವಣೆಗಾಗಿ ಬಿಡಿಎ ಭೂಸ್ವಾಧೀನ ನಡೆಸುತ್ತಿದೆ


3,546 ಎಕರೆ 12 ಗುಂಟೆ:ಈ ಬಡಾವಣೆಗೆ ಬಿಡಿಎ ಸ್ವಾಧೀನಪ‍ಡಿಸಿಕೊಳ್ಳುವ ಒಟ್ಟು ಜಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.