ಬೆಂಗಳೂರು: ಕೇಂದ್ರ ಸರ್ಕಾರ, ‘ಪೋಷಣ್’ ಯೋಜನೆಯಡಿ ಸಿರಿಧಾನ್ಯಗಳ ಆಹಾರ ಪೂರೈಸುವ ಕುರಿತು ಚಿಂತನೆ ನಡೆದಿದೆ ಎಂದು ಕೇಂದ್ರ ಕೃತಿ ಮತ್ತು ರೈತರ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಹೇಳಿದರು.
ನಗರದ ಅರಮನೆ ಆವರಣದಲ್ಲಿ ಭಾನುವಾರ ಕೃಷಿ ಇಲಾಖೆ ಆಯೋಜಿಸಿದ್ದ ಸಾವಯವ ಮತ್ತು ಸಿರಿಧಾನ್ಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೋಷಣ್ ಯೋಜನೆಗೆ ಸಿರಿಧಾನ್ಯ ಬಳಕೆ ಮಾಡುವುದರಿಂದ, ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಲಭ್ಯವಾಗುತ್ತದೆ. ಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತದೆ. ರೈತರಿಗೂ ಸಹಾಯವಾಗುತ್ತದೆ ಎಂದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, 'ಕರ್ನಾಟಕದಲ್ಲಿ 2016 ರಲ್ಲೇ ಸಿರಿಧಾನ್ಯಗಳ ಜಾಗೃತಿ ಅಭಿಯಾನ ಶುರುವಾಯಿತು. ಅದರ ಫಲವಾಗಿಯೇ 2023ನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಲಾಯಿತು’ ಎಂದರು.
'ಸಿರಿಧಾನ್ಯಕ್ಕೆ ರಾಜ್ಯದಲ್ಲಿ ಉತ್ತಮ ಪ್ರೋತ್ಸಾಹ ದೊರೆತಿದೆ. ಆ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಸಿರಿಧಾನ್ಯ ಮಾರುಕಟ್ಟೆ ವೃದ್ಧಿಯಾಗಿದೆ. ಉದ್ಯೋಗ ಸೃಷ್ಟಿಯಾಗುತ್ತಿದೆ. ರೈತರೂ ಆರ್ಥಿಕ ಲಾಭಗಳಿಸುವಂತಾಗಿದೆ' ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, 'ಸಿರಿಧಾನ್ಯ ನಮ್ಮ ಪರಂಪರೆಯ ಆಹಾರವಾಗಿದ್ದು, ಅದನ್ನು ಬೆಳೆಸಿ, ಬಳಸಬೇಕು' ಎಂದರು. ರಾಜ್ಯ ಸರ್ಕಾರ ಕೃಷಿ ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಸಿರಿಧಾನ್ಯಗಳ ಜಾಗೃತಿ ಗೆ ವಿಶೇಷ ಕಾಳಜಿ ವಹಿಸಿದೆ.ಈ ಮೇಳ ಅಚ್ಚುಕಟ್ಟಾಗಿ ನಡೆದಿದೆ' ಎಂದು ಶ್ಲಾಘಿಸಿದರು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, 'ಮೂರು ದಿನಗಳ ಮೇಳದಲ್ಲಿ 16 ರಾಜ್ಯಗಳ ರೈತರು, ಉದ್ದಿಮೆದಾರರು ಭಾಗವಹಿಸಿದ್ದರು. ದೇಶ ವಿದೇಶಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು. 147 ಮಾರುಕಟ್ಟೆದಾರರು, ರಫ್ತುದಾರರು, 275 ಉತ್ಪದಕರು/ಮಾರಾಟಗಾರರು ಬಿ2ಬಿ (ವ್ಯಾಪಾರ- ವ್ಯವಹಾರ ಒಡಂಬಡಿಕೆ) ಸಭೆಯಲ್ಲಿ ಪಾಲ್ಗೊಂಡಿದ್ದರು. ₹150 ಕೋಟಿ ಮೌಲ್ಯದ 27 ಒಡಂಬಡಿಕೆಯಾಗಿವೆ' ಎಂದು ಮಾಹಿತಿ ನೀಡಿದರು. ಮೂರು ದಿನಗಳ ಮೇಳದಲ್ಲಿ ₹20 ಕೋಟಿ ವಹಿವಾಟು ನಡೆದಿದೆ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.