ಬೆಂಗಳೂರು: ‘ಮಹಾರಾಷ್ಟ್ರದಲ್ಲಿ ಭೋವಿ ಸಮಾಜದವರಿಗೆ ಮಾತ್ರ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಬೇಕು’ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಎಚ್.ಡಿ.ಬಸವರಾಜು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು ‘ರಾಜ್ಯದ ಕಲ್ಲು ಗಣಿಗಾರಿಕೆ ಕೇಂದ್ರಗಳನ್ನು ಬಂಡವಾಳಶಾಹಿಗಳಿಗೆ ನೀಡುವ ಮೂಲಕ, ಇದನ್ನೇ ಕುಲ ಕಸುಬಾಗಿ ಮಾಡಿಕೊಂಡಿರುವ ಭೋವಿ ಸಮಾಜದವರಿಗೆ ಅನ್ಯಾಯ ಮಾಡಲಾಗುತ್ತಿದೆ. ಇವರ ಉದ್ಯೋಗ ಕಿತ್ತುಕೊಳ್ಳಲಾಗುತ್ತಿದೆ. ಬಂಡವಾಳಶಾಹಿಗಳಿಗೆ ನಾಡಿನ ಸಂಪನ್ಮೂಲದ ಮೇಲೆ ಯಾವ ಭಾವನಾತ್ಮಕ ಸಂಬಂಧವೂ ಇರುವುದಿಲ್ಲ. ಹಣ ಮಾಡುವ ದುರುದ್ದೇಶ ಹೊಂದಿರುವ ಅವರು ರಾಜ್ಯದ ಸಂಪನ್ಮೂಲವನ್ನು ಸಾಧ್ಯವಾದಷ್ಟು ಲೂಟಿ ಮಾಡುತ್ತಿದ್ದಾರೆ’ ಎಂದರು.
‘ರಾಜ್ಯದಲ್ಲಿ ಗಣಿ ಮತ್ತು ಭೂವಿಜ್ಞಾನ ಕಾಯ್ದೆಗೆ ತಿದ್ದುಪಡಿ ತಂದು ಭೋವಿ ಸಮಾಜದವರಿಗೆ ಮಾತ್ರ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಬೇಕು. ಕ್ರಷರ್ ಯೂನಿಟ್ ಆರಂಭಿಸಲು ಅಗತ್ಯವಿರುವ ಅತ್ಯಾಧುನಿಕ ಉಪಕರಣ ಖರೀದಿಸಲು ಅವರಿಗೆ ಹಣಕಾಸಿನ ನೆರವು ಒದಗಿಸಬೇಕು. ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಭೋವಿ ಸಮಾಜದ ಮೇಲೆ ಕಾಳಜಿ ಇದ್ದರೆ ಕಾಯ್ದೆಗೆ ತಿದ್ದುಪಡಿ ತರಲಿ’ ಎಂದು ಸವಾಲು ಹಾಕಿದರು.
ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಮುಖಂಡರಾದ ಪ್ರಕಾಶ್ ನಾಗರಾಜ್, ಉಷಾ ಮೋಹನ್, ಜ್ಯೋತಿಷ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.