ADVERTISEMENT

ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಅ.31ರ ಗಡುವು

43 ಕೆರೆಗಳಿಗೆ ನೀರು ತುಂಬಿಸುವ ಹೊಸಕೋಟೆ ಏತ ನೀರಾವರಿ ಯೋಜನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 14:37 IST
Last Updated 5 ಆಗಸ್ಟ್ 2023, 14:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: 43 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಹರಿಸುವ ಹೊಸಕೋಟೆ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಅಕ್ಟೋಬರ್‌ 31ರ ಒಳಗೆ ಪೂರ್ಣಗೊಳಿಸುವಂತೆ ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಗಡುವು ನೀಡಿದರು.

ಈ ಯೋಜನೆಯ ಕಾಮಗಾರಿ ವಿಳಂಬವಾಗಿರುವ ಕುರಿತು ಅಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿದ ಅವರು, ‘ಟೆಂಡರ್‌ ಷರತ್ತಿನ ಪ್ರಕಾರ, 2022ರ ಸೆಪ್ಟೆಂಬರ್‌ 28ರಂದು ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಹತ್ತು ತಿಂಗಳಷ್ಟು ವಿಳಂಬವಾದರೂ ಕಾಮಗಾರಿ ಮುಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗುತ್ತಿಗೆದಾರರು ನಿಗದಿತ ಯೋಜನೆಯಂತೆ ಕಾಮಗಾರಿಯ ವೇಗ ಕಾಯ್ದುಕೊಂಡಿರುವುದನ್ನು ಅಧಿಕಾರಿಗಳು ಪರಿಶೀಲಿಸಿ, ಖಾತರಿಪಡಿಸಿಕೊಳ್ಳಬೇಕು. ಕಾಮಗಾರಿಯ ವೇಗ ತಗ್ಗಿದರೆ ಎಚ್ಚರಿಕೆ ನೀಡಿ, ಗಡುವಿನೊಳಗೆ ಪೂರ್ಣಗೊಳಿಸುವಂತೆ ನಿಗಾ ವಹಿಸಬೇಕು. ಅ.31ಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸಲೇಬೇಕು. ಆ ನಂತರ ಯಾವುದೇ ಕಾರಣ ನೀಡಲು ಅವಕಾಶ ನೀಡುವುದಿಲ್ಲ ಎಂದರು.

ADVERTISEMENT

ಈ ಯೋಜನೆ ಅಡಿ  2 ಕಿ.ಮೀ. ಉದ್ದ ಕೊಳವೆ ಮಾರ್ಗದ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ದೊರಕಿರಲಿಲ್ಲ. ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಾಧಿಕಾರದ ಅಧಿಕಾರಿಗಳು, ‘ಕೊಳವೆ ಮಾರ್ಗ ಅಳವಡಿಕೆಗೆ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸೋಮವಾರದಿಂದಲೇ ಕಾಮಗಾರಿ ಆರಂಭಿಸಬಹುದು’ ಎಂದರು.

ಹೆಬ್ಬಾಳ – ನಾಗವಾರ ಕಣಿವೆ ಯೋಜನೆಯ ಬಾಕಿ ಕಾಮಗಾರಿಗಳ ವೇಗವನ್ನೂ ಹೆಚ್ಚಿಸಬೇಕು. ಸೆಪ್ಟಂಬರ್‌ 15ರಂದು ಕಾಮಗಾರಿ ಪರಿಶೀಲನೆ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.