ADVERTISEMENT

480 ತೆರಿಗೆ ವಂಚನೆ ಪ್ರಕರಣ ಪತ್ತೆ: ಎಚ್‌.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 23:30 IST
Last Updated 18 ಜುಲೈ 2023, 23:30 IST
ಎಚ್‌.ಕೆ ಪಾಟೀಲ
ಎಚ್‌.ಕೆ ಪಾಟೀಲ   

ಬೆಂಗಳೂರು: ’ಕಳೆದ ಎರಡು ತಿಂಗಳಲ್ಲಿ 480 ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ನಕಲಿ ಬಿಲ್‌ಗಳ 1,600 ಪ್ರಕರಣಗಳನ್ನು ಪತ್ತೆ ಮಾಡಿ ₹92 ಕೋಟಿ ವಸೂಲಿ ಮಾಡಲಾಗಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಕರ್ನಾಟಕ ಸರಕು ಮತ್ತು ಸೇವೆಗಳ (ತಿದ್ದುಪಡಿ) ಮಸೂದೆ ಮಂಡಿಸಿ ವಿವರಿಸಿದ ಅವರು, ‘2017ರಲ್ಲಿ ₹44 ಸಾವಿರ ಕೋಟಿ ಜಿಎಸ್‌ಟಿ ಸಂಗ್ರಹವಾಗುತ್ತಿತ್ತು. ಈಗ ₹81,848 ಕೋಟಿ ಸಂಗ್ರಹವಾಗುತ್ತಿದೆ. ಶೇ 56ರಷ್ಟು ತೆರಿಗೆ ಸೇವಾ ವಲಯದಿಂದ ದೊರೆಯುತ್ತಿದೆ’ ಎಂದು ವಿವರಿಸಿದರು.

’ವ್ಯಾಟ್‌ ವ್ಯವಸ್ಥೆಯಲ್ಲಿ ಕೇವಲ 5.8 ಲಕ್ಷ ತೆರಿಗೆ ಪಾವತಿದಾರರಿದ್ದರು. ಈಗ ಜಿಎಸ್‌ಟಿ ವ್ಯಾಪ್ತಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. ಅಡಿಕೆ, ಗುಜರಿ, ಸಿಮೆಂಟ್‌, ಕ್ರಷರ್‌ಗಳಿಂದ ವ್ಯಾಪಕ ತೆರಿಗೆ ವಂಚನೆಯಾಗುತ್ತಿರುವ ಬಗ್ಗೆ ದೂರುಗಳಿವೆ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಆರ್ಥಿಕ ಶಿಸ್ತು ಮತ್ತು ಸಂಪನ್ಮೂಲ ಕ್ರೋಡಿಕರಣಕ್ಕೆ ಒತ್ತು ನೀಡಲು ಹಾಗೂ ತೆರಿಗೆ ವಸೂಲಾತಿಯಲ್ಲಿ ಸುಧಾರಣೆಗಳನ್ನು ತರಲು ಸರ್ಕಾರ ದೃಢ ಹೆಜ್ಜೆಗಳನ್ನು ಇಟ್ಟಿದೆ’ ಎಂದು ತಿಳಿಸಿದರು.

ADVERTISEMENT

ಜೆಡಿಎಸ್‌ನ ಎಸ್‌.ಎಲ್‌.ಭೋಜೇಗೌಡ, ‘ಗುಜರಿ ವಸ್ತುಗಳ ವಹಿವಾಟು ಬಗ್ಗೆ ನಿರ್ಲಕ್ಷ್ಯ ಮಾಡಬಾರದು’ ಎಂದರು.

ಬಿಜೆಪಿಯ ಕೆ.ಎಸ್‌. ನವೀನ್‌, ‘ತೆರಿಗೆ ಪಾವತಿಸುವವರಿಗೆ ನೋಟಿಸ್‌ ನೀಡಿ ಕಿರುಕುಳ ನೀಡಲಾಗುತ್ತಿದೆ. ಕೆಳಹಂತದ ಅಧಿಕಾರಿಗಳು ಮರ್ಯಾದೆ ಕೊಡುವುದಿಲ್ಲ’ ಎಂದು ದೂರಿದರು.

ಬಿಜೆಪಿಯ ಮುನಿರಾಜು, ‘ಅಧಿಕಾರಿಗಳು ದರ್ಪ ತೋರುತ್ತಾರೆ. ಕಳ್ಳರ ರೀತಿ ನೋಡುತ್ತಾರೆ. ಅಧಿಕಾರಿಗಳ ದಬ್ಬಾಳಿಕೆಯನ್ನು ನಿಯಂತ್ರಿಸಬೇಕು’ ಎಂದು ಒತ್ತಾಯಿಸಿದರು.

ಚರ್ಚೆ ಬಳಿಕ ಮಸೂದೆಗೆ ಅನುಮೋದನೆ ನೀಡಲಾಯಿತು. ಎಸ್‌ಸಿ ಮತ್ತು ಎಸ್‌ಟಿ ಗುತ್ತಿಗೆದಾರರು ಕೈಗೊಳ್ಳುವ ನಿರ್ಮಾಣ ಕಾಮಗಾರಿಗಳ ಮೊತ್ತದ ಮಿತಿಯನ್ನು ₹50 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಮಸೂದೆ ಹಾಗೂ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ)(ತಿದ್ದುಪಡಿ) ಮಸೂದೆಗೂ ವಿಧಾನ ಪರಿಷತ್‌ ಅನುಮೋದನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.