ADVERTISEMENT

ಡ್ರಗ್ಸ್‌ ಬಳಕೆಗೆ ಪ್ರಚೋದನೆಯೂ ಅಪರಾಧವಾಗಿ ಪರಿಗಣನೆ

ವಿಧಾನ ಪರಿಷತ್‌ನಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 22:23 IST
Last Updated 21 ಸೆಪ್ಟೆಂಬರ್ 2020, 22:23 IST
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸೋಮವಾರ ವಿಧಾನ ಪರಿಷತ್‌ನಲ್ಲಿ ಮಾತನಾಡಿದರು. (ಮೊದಲ ಸಾಲು; ಎಡದಿಂದ) ಸಚಿವರಾದ ಎಸ್‌. ಸುರೇಶ್‌ ಕುಮಾರ್‌, ಬಿ. ಶ್ರೀರಾಮುಲು ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಇದ್ದರು
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸೋಮವಾರ ವಿಧಾನ ಪರಿಷತ್‌ನಲ್ಲಿ ಮಾತನಾಡಿದರು. (ಮೊದಲ ಸಾಲು; ಎಡದಿಂದ) ಸಚಿವರಾದ ಎಸ್‌. ಸುರೇಶ್‌ ಕುಮಾರ್‌, ಬಿ. ಶ್ರೀರಾಮುಲು ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಇದ್ದರು   

ಬೆಂಗಳೂರು: ಡ್ರಗ್ಸ್‌ ಬಳಕೆಯನ್ನು ಯಾವುದೇ ರೀತಿಯಲ್ಲಿ ಪ್ರಚೋದಿಸುವುದನ್ನು ಗಂಭೀರ ಅಪರಾಧವಾಗಿ ಪರಿಗಣಿಸುವಂತೆ ಮಾದಕವಸ್ತು ನಿಯಂತ್ರಣ ಕಾಯ್ದೆಗೆ (ಎನ್‌ಡಿಪಿಎಸ್‌) ತಿದ್ದುಪಡಿ ತರಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ಬಿಜೆಪಿಯ ಭಾರತಿ ಶೆಟ್ಟಿ ಮತ್ತು ಲೆಹರ್‌ ಸಿಂಗ್‌ ಸಿರೋಯಾ ಅವರು ನಿಯಮ 72ರಡಿ ಮಂಡಿಸಿದ ಸೂಚನೆಗೆ ಉತ್ತರಿಸಿದ ಸಚಿವರು, ‘ಕಾಯ್ದೆ ತಿದ್ದುಪಡಿಗೆ ಪೂರಕವಾಗಿ ಕರಡನ್ನು ರೂಪಿಸುವಂತೆ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಕಾನೂನು ತಜ್ಞರು ಮತ್ತು ಅಡ್ವೊಕೇಟ್‌ ಜನರಲ್‌ ಅವರನ್ನು ಕೋರಲಾಗಿದೆ. ಕರಡು ವರದಿ ದೊರೆತ ಬಳಿಕ ಕಾನೂನು ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಡ್ರಗ್ಸ್‌ ಬಳಕೆ ನಿಯಂತ್ರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಜಾಲದಲ್ಲಿ ಸಕ್ರಿಯ ರಾಗಿದ್ದ 21 ಮಂದಿ ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಚಿತ್ರರಂಗದವರೂ ಸೇರಿದಂತೆ ಹಲವರು ಸಕ್ರಿಯರಾಗಿದ್ದ ಜಾಲವೊಂದರ ವಿರುದ್ಧ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದರು.

ADVERTISEMENT

ಸಮಿತಿ ರಚನೆಗೆ ಆಗ್ರಹ: ವಿಷಯ ಪ್ರಸ್ತಾಪಿಸಿ ಮಾತನಾಡಿದ ಭಾರತಿ ಶೆಟ್ಟಿ, ‘ಮಾದಕ ವಸ್ತು ನಿಯಂತ್ರಣ ಕಾಯ್ದೆಯನ್ನು ಬಲಪಡಿಸುವ ಸಂಬಂಧ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಿ ಸಲಹೆ ಪಡೆಯಬೇಕು’ ಎಂದು ಆಗ್ರಹಿಸಿದರು.

ಲೆಹರ್‌ ಸಿಂಗ್‌ ಮಾತನಾಡಿ, ‘ಈಗ ಪತ್ತೆಯಾಗಿರುವ ಡ್ರಗ್ಸ್‌ ಜಾಲದ ಹಿಂದೆ ಐಪಿಎಸ್‌ ಅಧಿಕಾರಿಗಳೂ ಇರುವ ಮಾಹಿತಿ ಹರಿದಾಡುತ್ತಿದೆ. ಸ್ಥಳೀಯ ಪೊಲೀಸರು ಹಫ್ತಾ ಪಡೆದು ಡ್ರಗ್ಸ್‌ ಪೂರೈಕೆಗೆ ಅವಕಾಶ ನೀಡುತ್ತಿದ್ದಾರೆ’ ಎಂದರು.

ಮರಣ ದಂಡನೆಗೆ ಸಲಹೆ: ‘ಜಗತ್ತಿನ 32 ರಾಷ್ಟ್ರಗಳು ಡ್ರಗ್ಸ್‌ ಸಂಬಂಧಿ ಅಪರಾಧಕ್ಕೆ ಮರಣದಂಡನೆ ವಿಧಿಸುತ್ತಿವೆ. ರಾಜ್ಯದಲ್ಲೂ ಅಂತಹ ಕ್ರಮ ಕೈಗೊಳ್ಳಬೇಕು’ ಎಂದು ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಸಲಹೆ ನೀಡಿದರು.

ಕಾಂಗ್ರೆಸ್‌ನ ಕೆ.ಸಿ. ಕೊಂಡಯ್ಯ ಮಾತನಾಡಿ, ‘ಶಾಲೆಗಳಲ್ಲಿ ಮಾದಕವಸ್ತು ಬಳಕೆ ಕುರಿತ ತಪಾಸಣಾ ವರದಿ ಸಲ್ಲಿಕೆ ಕಡ್ಡಾಯಗೊಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.