ADVERTISEMENT

ಶಾಸಕ ಎಸ್ ಆರ್ ವಿಶ್ವನಾಥ್ ಬ್ರಹ್ಮ ರಾಕ್ಷಸ: ಜಿ.ಸಿ ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 0:30 IST
Last Updated 17 ಫೆಬ್ರುವರಿ 2025, 0:30 IST
ನಗಾರಿ ಬಾರಿಸುವ ಮೂಲಕ ಜನಮಾನಸ ಸಮಾವೇಶಕ್ಕೆ ಚಾಲನೆ ನೀಡಲಾಯಿತು
ನಗಾರಿ ಬಾರಿಸುವ ಮೂಲಕ ಜನಮಾನಸ ಸಮಾವೇಶಕ್ಕೆ ಚಾಲನೆ ನೀಡಲಾಯಿತು   

ಹೆಸರಘಟ್ಟ: ‘ಯಲಹಂಕ ಕ್ಷೇತ್ರದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಬೇಕಾದರೆ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಜನ ಸಿದ್ಧರಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳಬೇಕು’ ಎಂದು ರಾಜ್ಯಸಭಾ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಹೇಳಿದರು.

ಹೆಸರಘಟ್ಟದಲ್ಲಿ ಭಾನುವಾರ ನಡೆದ ‘ಜನಮಾನಸ’ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ಯಲಹಂಕ ಕ್ಷೇತ್ರದಲ್ಲಿ ಒಬ್ಬ ಬ್ರಹ್ಮ ರಾಕ್ಷಸನ ವಧೆ ಮಾಡಬೇಕಿದೆ. ದೊಡ್ಡ ತಿಮಿಂಗಿಲವನ್ನು ಮಣಿಸಬೇಕು. ಯುದ್ಧ ಮಾಡಬೇಕೆಂದರೆ ಸೈನ್ಯ ಸದೃಢವಾಗಿರಬೇಕು. ಈ ನಿಟ್ಟಿನಲ್ಲಿ ಶಾಸಕರು ಮಾಡಿರುವ ಅವ್ಯವಹಾರ, ಅನ್ಯಾಯ, ಭೂ ಹಗರಣಗಳನ್ನು ಬಯಲು ಮಾಡಬೇಕು’ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ವಿರುದ್ಧ ಹರಿಹಾಯ್ದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಯಾರಿಗೂ ಅಂಜದೆ, ಎದೆಗುಂದದೆ ಸ್ವಾಭಿಮಾನದಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈ ಭಾಗದಲ್ಲಿ ಹೊಂದಾಣಿಕೆ ರಾಜಕೀಯವನ್ನು ಇನ್ನು ಮುಂದೆ ಸಹಿಸುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಶಾಸಕರನ್ನು ಬದಲಾವಣೆ ಮಾಡಲು ಈ ಸಮಾವೇಶ ನಾಂದಿಯಾಗಲಿದೆ ಎಂದರು.

ADVERTISEMENT

ಸಮಾವೇಶದಲ್ಲಿ ಪಕ್ಷದ ವಿವಿಧ ವಿಭಾಗಗಳಿಗೆ ನೇಮಕಗೊಂಡ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಲಾಯಿತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಲವು ಮುಖಂಡರನ್ನು ಕಾಂಗ್ರೆಸ್‌ಗೆ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಯಲಹಂಕ ಕಾಂಗ್ರೆಸ್ ಮುಖಂಡ ಬಿ.ಕೇಶವ ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ವಾಜಿದ್, ಬ್ಲಾಕ್ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾದ ಮಂಜುನಾಥ್ ಅದ್ದೆ, ಶ್ರೀನಿವಾಸ್, ಎಚ್. ಮೂರ್ತಿ , ಯಲಹಂಕ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಪ್ರೇಮಲತಾ ಬಸವರಾಜು, ವೀಣಾ ರಮೇಶ್, ಮುಖಂಡರಾದ ಕೇಶವಮೂರ್ತಿ, ಲಕ್ಷ್ಮಣಮೂರ್ತಿ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.