ADVERTISEMENT

ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ: ಮೂವರ ಬಂಧನ

‘ಭೇಟೆಗೆ ಅವಕಾಶ ಸಿಗದಿದ್ದಕ್ಕೆ ಕಾರಿಗೆ ಬೆಂಕಿ’

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 19:42 IST
Last Updated 13 ಆಗಸ್ಟ್ 2021, 19:42 IST
ಕಾರುಗಳಿಗೆ ಬೆಂಕಿ
ಕಾರುಗಳಿಗೆ ಬೆಂಕಿ   

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣ ಭೇದಿಸಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಗಾರ್ವೆಬಾವಿಪಾಳ್ಯದ ನಿವಾಸಿ ಸಾಗರ್ (19), ಬೇಗೂರಿನ ಶ್ರೀಧರ್ (20) ಹಾಗೂ ನವೀನ್ ಅಲಿಯಾಸ್ ಕಾಳಪ್ಪ (22) ಬಂಧಿತರು. ಬುಧವಾರ (ಆ. 11) ತಡರಾತ್ರಿ ಸತೀಶ್ ರೆಡ್ಡಿ ಅವರ ಮನೆ ಆವರಣಕ್ಕೆ ನುಗ್ಗಿದ್ದ ಆರೋಪಿಗಳು, ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಸುಳಿವು ಪತ್ತೆ ಮಾಡಿ ಶುಕ್ರವಾರ ಸಂಜೆ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದರು.

‘ಆರೋಪಿಗಳ ಬಂಧನಕ್ಕೆ ಐದು ತಂಡಗಳನ್ನು ರಚಿಸಲಾಗಿತ್ತು. ಪುರಾವೆ ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ತಂಡಗಳು ಯಶಸ್ವಿಯಾಗಿವೆ. ತನಿಖಾ ತಂಡಗಳಿಗೆ ₹ 1 ಲಕ್ಷ ಬಹುಮಾನ ಘೋಷಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

ಸಮಸ್ಯೆ ಹೇಳಲು ಸಿಗದ ಅವಕಾಶ: ‘ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಿವಾಸಿಗಳಾದ ಆರೋಪಿಗಳು, ತಮ್ಮ ಸಮಸ್ಯೆಗಳನ್ನು ಶಾಸಕರಿಗೆ ಹೇಳಿಕೊಳ್ಳಲು ಹಲವು ಬಾರಿ ಮನೆಗೆ ಬಂದು ಹೋಗಿದ್ದರು. ಆದರೆ, ಅವರಿಗೆ ಒಮ್ಮೆಯೂ ಶಾಸಕರ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಸಿಟ್ಟಾಗಿದ್ದ ಅವರು ಶಾಸಕರ ಮನೆ ಆವರಣಕ್ಕೆ ನುಗ್ಗಿ ಕೃತ್ಯ ಎಸಗಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶಾಸಕ ಸತೀಶ್ ರೆಡ್ಡಿ ಶ್ರೀಮಂತರು. ನಮ್ಮಂಥ ಬಡವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ನಮ್ಮ ಸಮಸ್ಯೆಗಳನ್ನೂ ಆಲಿಸಲು ಅವರ ಬಳಿ ಸಮಯವಿಲ್ಲ. ಮನೆ ಬಳಿ ಹೋದರೂ ಅವರನ್ನು ಭೇಟಿಯಾಗಲು ಅವಕಾಶ ಸಿಗಲಿಲ್ಲ. ಇದರಿಂದ ಸಿಟ್ಟಾಗಿ, ಅವರ ಕಾರುಗಳಿಗೆ ಬೆಂಕಿ ಹಚ್ಚಿದೆವು’ ಎಂಬುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಕದ್ದ ಬೈಕ್ ನೀಡಿದ ಸುಳಿವು: ‘ಕಾರುಗಳಿಗೆ ಬೆಂಕಿ ಹಚ್ಚಲು ಸಂಚು ರೂಪಿಸಿದ್ದ ಆರೋಪಿಗಳು, ಶಾಸಕ ಸತೀಶ್ ರೆಡ್ಡಿ ಮನೆ ಬಳಿ ಹಲವು ಬಾರಿ ಸುತ್ತಾಡಿದ್ದರು. ಸಮೀಪದಲ್ಲೇ ಇದ್ದ ಬಂಕ್‌ನಲ್ಲಿ ತಮ್ಮ ಬೈಕ್‌ಗಳಿಗೆ ಪೆಟ್ರೋಲ್ ಹಾಕಿಸಿಕೊಂಡಿದ್ದರು. ಅದೇ ಪೆಟ್ರೋಲ್‌ ಬಾಟಲಿಗೆ ತುಂಬಿಕೊಂಡು ಕಾರುಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಕೃತ್ಯ ಎಸಗಿ ಪರಾರಿಯಾಗುವ ವೇಳೆ ಆರೋಪಿಗಳು, ಸ್ಥಳೀಯರೊಬ್ಬರ ಬೈಕ್ ಕದ್ದುಕೊಂಡು ಹೋಗಿದ್ದರು. ಅದರ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದೇ ಬೈಕ್ ನೀಡಿದ್ದ ಸುಳಿವಿನಿಂದ ಆರೋಪಿಗಳು ಸಿಕ್ಕಿಬಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.