ADVERTISEMENT

ಮೊಬೈಲ್ ಸುಲಿಗೆ: ಆರೋಪಿ ಬೆನ್ನಟ್ಟಿ ಹಿಡಿದ ಹೆಡ್ ಕಾನ್‌ಸ್ಟೆಬಲ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 22:30 IST
Last Updated 10 ನವೆಂಬರ್ 2023, 22:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರೊಬ್ಬರ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಆರೋಪಿ ಸಿತೇಶ್‌ನನ್ನು ಹೆಡ್‌ ಕಾನ್‌ಸ್ಟೆಬಲ್‌ ಎಚ್‌.ಆರ್‌. ಮೋಹನ್ ಕುಮಾರ್ ಅವರು ಬೆನ್ನಟ್ಟಿ ಹಿಡಿದು, ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸುಪರ್ದಿಗೆ ಒಪ್ಪಿಸಿದ್ದಾರೆ.

ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಕರ್ತವ್ಯದಲ್ಲಿದ್ದ ಮೋಹನ್, ಆರೋಪಿಯನ್ನು ಬೆನ್ನಟ್ಟಿ ಹಿಡಿದಿದ್ದಕ್ಕೆ ಡಿಸಿಪಿ ಕುಲ್‌ದೀಪ್‌ಕುಮಾರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಆಗಿದ್ದೇನು: ‘ಕುಂದಲಹಳ್ಳಿ ಐಟಿಪಿಎಲ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಟೆಕ್ ಪಾರ್ಕ್ ಬಳಿಯ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ ಶಾಂತನಿ ಚಕ್ರವರ್ತಿ, ಸಂಜೆ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತ ಮನೆಯತ್ತ ಹೊರಟಿದ್ದರು’ ಎಂದು ಪೊಲೀಸರು ಹೇಳಿದರು.

‘ಶಾಂತನಿ ಅವರನ್ನು ಹಿಂಬಾಲಿಸಿದ್ದ ಆರೋಪಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ. ಕಳ್ಳ... ಕಳ್ಳ... ಎಂದು ಶಾಂತನಿ ಕೂಗಾಡಿದ್ದರು. ಸಮೀಪದ ಆಂಜನೇಯ ಜಂಕ್ಷನ್‌ನಲ್ಲಿ ಕರ್ತವ್ಯದಲ್ಲಿದ್ದ ಎಚ್‌.ಎ.ಎಲ್ ಸಂಚಾರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಮೋಹನ್, ಆರೋಪಿಯನ್ನು ಬೆನ್ನಟ್ಟಿದ್ದರು. ಸಾರ್ವಜನಿಕರ ಸಹಾಯದಿಂದ ಆರೋಪಿಯನ್ನು ಹಿಡಿದುಕೊಂಡಿದ್ದರು.’

‘ಸುಲಿಗೆ ಆರೋಪಿ ಸಿಕ್ಕಿರುವುದಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ಹೋಗಿತ್ತು. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ಅವರೇ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.