
ಬೆಂಗಳೂರು: ಕಳ್ಳತನವಾದ ಹಾಗೂ ನಿರ್ಲಕ್ಷ್ಯದಿಂದ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಿಕೊಳ್ಳುವ ಕಾರ್ಯಾಚರಣೆಯನ್ನು ನಗರ ಪೊಲೀಸರು ಚುರುಕುಗೊಳಿಸಿದ್ದು, 2024ರ ಮಾರ್ಚ್ 1ರಿಂದ ಇದುವರೆಗೂ ₹3 ಕೋಟಿ ಮೌಲ್ಯದ 1,949 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.
ನಗರದ 9 ವಿಭಾಗಗಳಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿ ಮೊಬೈಲ್ ವಶಕ್ಕೆ ಪಡೆದುಕೊಂಡು ಮಾಲೀಕರಿಗೆ ಹಿಂದಿರುಗಿಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.
ಕಳ್ಳತನವಾದ ಮೊಬೈಲ್‌ಗಳ ಮಾಹಿತಿಯನ್ನು ಇ–ಲಾಸ್ಟ್ ಆ್ಯಪ್ ಮತ್ತು ಕೇಂದ್ರ ಸರ್ಕಾರ ರೂಪಿಸಿರುವ ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಜಾಲತಾಣದಲ್ಲಿ ದಾಖಲು ಮಾಡಲಾಗುತ್ತದೆ. ತಾಂತ್ರಿಕ ಸುಳಿವು ಆಧರಿಸಿ, ಪೊಲೀಸರು ತನಿಖೆ ನಡೆಸಿ ಮೊಬೈಲ್ ಪತ್ತೆ ಹಚ್ಚುತ್ತಾರೆ. ಕಳ್ಳತನವಾದ ಹಾಗೂ ಕಳೆದುಹೋದ ಮೊಬೈಲ್ ಫೋನ್‌ಗಳ ಐಎಂಇಐ ನಂಬರ್ ಆಧಾರದ ಮೇಲೆ ತಾಂತ್ರಿಕ ಮಾಹಿತಿಯನ್ನು ಕಲೆಹಾಕಿ 894 ಸ್ಮಾರ್ಟ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಅವುಗಳ ಪೈಕಿ 522 ಮೊಬೈಲ್‌ಗಳನ್ನು ಮಾಲೀಕರಿಗೆ ಮರಳಿಸಲಾಗಿದೆ. ಉಳಿದ 372 ಸ್ಪಾರ್ಟ್ ಫೋನ್‌ಗಳು ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ನಲ್ಲಿವೆ. ಅಗತ್ಯ ದಾಖಲೆಗಳನ್ನು ಹಾಜರು ಪಡಿಸಿದರೆ ವಾರಸುದಾರರಿಗೆ ಮೊಬೈಲ್ ಫೋನ್ ಮರಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಿಇಐಆರ್ ಜಾಲತಾಣದಲ್ಲಿ ದಾಖಲಾದ ದೂರು ಆಧರಿಸಿ 1,310 ಹಾಗೂ ಇತರೆ ಪ್ರಕರಣದಲ್ಲಿ 639 ಸೇರಿ ಒಟ್ಟು 1,949 ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಅವರು ವಿವರಿಸಿದರು.
28 ಮೊಬೈಲ್ ಫೋನ್ ಪತ್ತೆ: ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿಂತಿದ್ದ ಕಾರೊಂದನ್ನು ಪರಿಶೀಲಿಸಿದಾಗ ಅದರಲ್ಲಿ ವಿವಿಧ ಕಂಪನಿಯ 28 ಮೊಬೈಲ್‌ಗಳು ಪತ್ತೆ ಆಗಿದ್ದವು. ಅವುಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.
ಗಾಂಧಿನಗರದ ವೈ.ರಾಮಚಂದ್ರ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಉಪ್ಪಾರಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇನ್ನು ವಿಜಯನಗರ, ವರ್ತೂರು, ರಾಮಮೂರ್ತಿನಗರ, ಬಾಣಸವಾಡಿ, ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.
ಕದ್ದ ಮೊಬೈಲ್‌ಗೆ ಅಲ್ಯುಮಿನಿಯಂ ಕಾಯಿಲ್ ಸುತ್ತಿ ಪರಾರಿ
ನಗರದ ಜನಸಂದಣಿ ಪ್ರದೇಶ ಬಸ್ ನಿಲ್ದಾಣ ರೈಲ್ವೆ ನಿಲ್ದಾಣ ದೇವಸ್ಥಾನಗಳು ಹಾಗೂ ಬಿಎಂಟಿಸಿ ಬಸ್‌ನಲ್ಲಿ ಮೊಬೈಲ್ ಕಳವು ಮಾಡಿ ಪರಾರಿಯಾಗುತ್ತಿದ್ದ ಆರು ಮಂದಿಯನ್ನು ನಗರ ಕೇಂದ್ರ ವಿಭಾಗದ (ಸಿಸಿಬಿ) ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಆರೋಪಿಗಳು ಮೈಸೂರು ರಸ್ತೆಯ ನಿವಾಸಿಗಳು. ಬಂಧಿತರಿಂದ 422 ಸ್ಮಾರ್ಟ್ ಫೋನ್ ಕೃತ್ಯಕ್ಕೆ ಬಳಸಿದ ಆಟೊ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿಗಳು ಎರಡು ತಂಡಗಳಾಗಿ ಜನಸಂದಣಿಯಿರುವ ಪ್ರದೇಶಕ್ಕೆ ತೆರಳುತ್ತಿದ್ದರು. ಅಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಕದ್ದ ಮೊಬೈಲ್‌ಗೆ ಅಲ್ಯುಮಿನಿಯಂ ಕಾಯಿಲ್ ಸುತ್ತಿ ನೆಟ್‌ವರ್ಕ್ ಸಿಗದಂತೆ ಮಾಡುತ್ತಿದ್ದರು. ಮೊಬೈಲ್ ಕಳೆದುಕೊಂಡವರು ಬೇರೊಂದು ಮೊಬೈಲ್‌ನಲ್ಲಿ ತಕ್ಷಣವೇ ಕರೆ ಮಾಡಿದರೂ ಸಿಗ್ನಲ್ ಸಿಗುತ್ತಿರಲಿಲ್ಲ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.