ಬೆಂಗಳೂರು: ‘ಮೊಗಳ್ಳಿ ಗಣೇಶ್ ಅವರ ನಾನೆಂಬುದ ಕಿಂಚಿತ್ತು ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಗಬೇಕು’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಭಾನುವಾರ ಆಯೋಜಿಸಿದ್ದ ಬೌದ್ಧ ಚಿಂತಕ ಬುದ್ಧಘೋಷ್ ದೇವೇಂದ್ರ ಹೆಗ್ಗಡೆ ಹಾಗೂ ಸಾಹಿತಿ ಮೊಗಳ್ಳಿ ಗಣೇಶ್ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೊಗಳ್ಳಿ ಅಪರೂಪದ ಪ್ರತಿಭೆ ಹಾಗೂ ಸಾಹಿತಿ ಆಗಿದ್ದರು. ಉತ್ತಮ ಸಾಹಿತ್ಯವನ್ನು ಕನ್ನಡಕ್ಕೆ ನೀಡಿದ್ದಾರೆ. ಅವರ ಬುಗುರಿ, ಭತ್ತ, ನನ್ನ ಅಜ್ಜನಿಗೆ ಒಂದು ಆಸೆ ಇತ್ತು ಸೇರಿದಂತೆ ಹಲವಾರು ಕತೆಗಳು ನಮ್ಮ ಮನಸಿನಲ್ಲಿ ಉಳಿದುಕೊಳ್ಳುತ್ತವೆ. ಅವರಿಗೆ ಸಿಗಬೇಕಾದ ಪ್ರಶಸ್ತಿಗಳು, ಸ್ಥಾನಮಾನಗಳು ಸಿಗಲಿಲ್ಲ. ಶ್ರೇಷ್ಠತೆಯ ವ್ಯಸನದಿಂದ, ಜನರಿಂದ ದೂರ ಆಗಿದ್ದರು. ದಲಿತರಿಗೆ ಕೀರ್ತಿ ಮತ್ತು ಹಣ ಯಾವ ರೀತಿಯಾಗಿ ನಿರ್ವಹಣೆ ಮಾಡಬೇಕೆಂಬುದು ಗೊತ್ತಿಲ್ಲ. ಮೊಗಳ್ಳಿ ಸೇರಿದಂತೆ ನಮ್ಮೆಲ್ಲರಲ್ಲೂ ಈ ಮನೋಭಾವನೆ ಇದೆ’ ಎಂದು ತಿಳಿಸಿದರು.
‘ದೇವೇಂದ್ರ ಹೆಗ್ಗಡೆ ಅವರು ಬೌದ್ಧ ಚಳವಳಿಗೆ ಹೊಸ ರೂಪ ನೀಡಿದ್ದಾರೆ. ಶಹಾಪುರದಲ್ಲಿ ಬುದ್ಧ ವಿಹಾರವನ್ನು ನಿರ್ಮಿಸಿದ್ದಾರೆ. ದಲಿತರು ಬೌದ್ಧ ಧರ್ಮ ಸ್ವೀಕರಿಸಿದರೆ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂಬ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿದ್ದರು’ ಎಂದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಹೇಗೆ ಇರಬೇಕು ಎಂಬುದನ್ನು ದೇವೇಂದ್ರ ಹೆಗ್ಗೆಡೆ ಅವರನ್ನು ನೋಡಿ ಕಲಿತುಕೊಳ್ಳಬೇಕು. ಇವರು ದಲಿತ, ಬಹುಜನ ಹಾಗೂ ಬೌದ್ಧ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಮೊಗಳ್ಳಿ ಗಣೇಶ್ ಅವರ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ರಾಜ್ಯಮಟ್ಟದ ವಿಚಾರಸಂಕಿರಣ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಪತ್ರಕರ್ತರಾದ ಇಂದೂಧರ್ ಹೊನ್ನಾಪುರ, ನಂಜುಂಡೇಗೌಡ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಇಂದಿರಾ ಕೃಷ್ಣಪ್ಪ, ವಿ. ನಾಗರಾಜ್, ಹುಲಿಕುಂಟೆ ಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.