ADVERTISEMENT

ಯುವತಿಯ ಹಿಂಭಾಗ ಮುಟ್ಟಿ ಪರಾರಿ: ಬೈಕ್‌ ಕನ್ನಡಿ ಸುಳಿವಿನಿಂದ ಸಿಕ್ಕಿಬಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 17:59 IST
Last Updated 4 ಜೂನ್ 2021, 17:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವ ಯುವತಿಯ ಹಿಂಭಾಗವನ್ನು ಮುಟ್ಟಿ ಅದುಮಿ ಪರಾರಿಯಾದ ಆರೋಪದಡಿ ಅರುಣ್‌ಕುಮಾರ್ ಎಂಬಾತನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೆಜಿಎಫ್‌ನ ರಾಬರ್ಟ್‌ಸನ್‌ ಪೇಟೆಯ ನಿವಾಸಿ ಅರುಣ್‌ಕುಮಾರ್, ಕೋರಮಂಗಲದ ಮೇಸ್ತ್ರಿಪಾಳ್ಯದಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದ. ಆಹಾರ ಪೂರೈಕೆ ಕಂಪನಿಯಲ್ಲಿ ಡೆಲಿವರಿ ಬಾಯ್‌ ಆಗಿರುವ ತನ್ನ ಸಹೋದರನ ಬೈಕ್‌ನಲ್ಲಿ ಸುತ್ತಾಡಿ ಕೃತ್ಯ ಎಸಗುತ್ತಿದ್ದ. ಸಂತ್ರಸ್ತೆಯೊಬ್ಬರು ನೀಡಿದ್ದ ದೂರು ಆಧರಿಸಿ ಆತನನ್ನು ಸೆರೆಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸಹೋದರನಿಗೆ ಕಂಪನಿ ಗುರುತಿನ ಚೀಟಿ ಇತ್ತು. ಆತ ನಸುಕಿನಲ್ಲಿ ಆಹಾರ ಪೂರೈಕೆ ಮಾಡುತ್ತಿದ್ದ. ಅದೇ ಗುರುತಿನ ಚೀಟಿ ಬಳಸಿಕೊಂಡು ಆರೋಪಿ ಅರುಣ್‌ಕುಮಾರ್ ಸಂಜೆಯಿಂದ ರಾತ್ರಿವರೆಗೆ ಆಹಾರ ಪೂರೈಕೆ ಮಾಡಲು ಹೋಗುತ್ತಿದ್ದ.’

ADVERTISEMENT

‘ಮೇ 31ರ ರಾತ್ರಿ ಕೋರಮಂಗಲ 4ನೇ ಹಂತದಲ್ಲಿ ಬೈಕ್‌ನಲ್ಲಿ ಹೊರಟಿದ್ದ ಆರೋಪಿ, ಯುವತಿಯೊಬ್ಬರ ಹಿಂಭಾಗ ಮುಟ್ಟಿ ಅದುಮಿ ಪರಾರಿಯಾಗಿದ್ದ. ಈ ಬಗ್ಗೆ ಯುವತಿ ನಿಯಂತ್ರಣ ಕೊಠಡಿಗೆ ದೂರು ನೀಡಿದ್ದರು’ ಎಂದೂ ಪೊಲೀಸರು ಹೇಳಿದರು.

ಬೈಕ್‌ನ ಕನ್ನಡಿ ನೀಡಿದ ಸುಳಿವು: ‘ಘಟನಾ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದ ಪೊಲೀಸರು, ಆರೋಪಿ ಬೈಕ್‌ ಮೇಲೆ ಆಹಾರ ಪೂರೈಕೆ ಕಂಪನಿ ಹೆಸರು ಪತ್ತೆ ಮಾಡಿದ್ದರು. ಆದರೆ, ಬೈಕ್ ನೋಂದಣಿ ಸಂಖ್ಯೆ ಗೋಚರಿಸಿರಲಿಲ್ಲ. ಬೈಕ್‌ ಕನ್ನಡಿ ಹಾಗೂ ಮೊಬೈಲ್ ಸ್ಟ್ಯಾಂಡ್ ಮಾತ್ರ ಸ್ಪಷ್ಟವಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ಕಂಪನಿಯ ಡೆಲಿವರಿ ಬಾಯ್‌ಗಳ 80 ಬೈಕ್‌ಗಳನ್ನು ಪರಿಶೀಲಿಸಿದ್ದ ಪೊಲೀಸರು, ಕನ್ನಡಿ ಹಾಗೂ ಮೊಬೈಲ್‌ ಸ್ಟ್ಯಾಂಡ್‌ ಸುಳಿವಿನಿಂದಲೇ ಆರೋಪಿ ಬೈಕ್ ಪತ್ತೆ ಮಾಡಿದ್ದರು. ಆದರೆ, ಆರೋಪಿಯ ಸಹೋದರ ಹೆಸರಿನಲ್ಲಿ ಬೈಕ್‌ ಇತ್ತು. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಸಹೋದರನ ಹೆಸರು ಬಾಯ್ಬಿಟ್ಟ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.