ADVERTISEMENT

ವ್ಯಾಪಾರ ಕೇಂದ್ರವಾಗಿರುವ ಮಠಗಳು: ಅರವಿಂದ ಮಾಲಗತ್ತಿ ವಿಷಾದ

ದಲಿತರ ಹಕ್ಕೊತ್ತಾಯ ಸಮಾವೇಶ

​ಪ್ರಜಾವಾಣಿ ವಾರ್ತೆ
Published 3 ಜುಲೈ 2023, 21:59 IST
Last Updated 3 ಜುಲೈ 2023, 21:59 IST
ಗಾಂಧಿ ಭವನದಲ್ಲಿ ನಡೆದ ದಲಿತ ಹಕ್ಕೊತ್ತಾಯ ರಾಜ್ಯ ಸಮಾವೇಶಕ್ಕೆ ಸಾಹಿತಿ ಅರವಿಂದ ಮಾಲಗತ್ತಿ ಚಾಲನೆ ನೀಡಿದರು. ದಲಿತ ಹಕ್ಕುಗಳ ಸಮಿತಿಯ ಎನ್. ನಾಗರಾಜ್, ಟಿ.ಆರ್. ಚಂದ್ರಶೇಖರ್, ಗೋಪಾಲಕೃಷ್ಣ ಹರಳಹಳ್ಳಿ,
ಮಾಳಮ್ಮ ಇದ್ದರು
ಗಾಂಧಿ ಭವನದಲ್ಲಿ ನಡೆದ ದಲಿತ ಹಕ್ಕೊತ್ತಾಯ ರಾಜ್ಯ ಸಮಾವೇಶಕ್ಕೆ ಸಾಹಿತಿ ಅರವಿಂದ ಮಾಲಗತ್ತಿ ಚಾಲನೆ ನೀಡಿದರು. ದಲಿತ ಹಕ್ಕುಗಳ ಸಮಿತಿಯ ಎನ್. ನಾಗರಾಜ್, ಟಿ.ಆರ್. ಚಂದ್ರಶೇಖರ್, ಗೋಪಾಲಕೃಷ್ಣ ಹರಳಹಳ್ಳಿ, ಮಾಳಮ್ಮ ಇದ್ದರು     –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸಮಾಜವನ್ನು ತಿದ್ದುವುದರಲ್ಲಿ ಸ್ವಾಮೀಜಿಗಳ ಪಾತ್ರ ದೊಡ್ಡದಿದೆ. ಆದರೆ, ಅವರು ತಿದ್ದುವ ಕೆಲಸ ಮಾಡುತ್ತಿಲ್ಲ. ಮಠಗಳು ವ್ಯಾಪಾರ ಕೇಂದ್ರಗಳಾಗಿವೆ. ರಾಜಕೀಯ ಅದಕ್ಕೆ ಪೂರಕವಾಗಿದೆ’ ಎಂದು ಬರಹಗಾರ ಅರವಿಂದ ಮಾಲಗತ್ತಿ ವಿಷಾದ ವ್ಯಕ್ತಪಡಿಸಿದರು.

ದಲಿತ ಹಕ್ಕುಗಳ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ದಲಿತ ಹಕ್ಕೊತ್ತಾಯ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆರತಿ ತಟ್ಟೆ ಮುಟ್ಟಿದ್ದಕ್ಕೆ, ಕೋಲು ಮುಟ್ಟಿದ್ದಕ್ಕೆ ಹಲ್ಲೆ ನಡೆಯುತ್ತಿದೆ. ಜಾತಿ ವ್ಯವಸ್ಥೆಯ ಕಾರಣದಿಂದ ಇಂಥ ಹಲ್ಲೆಗಳು ನಿರಂತರವಾಗಿ ನಡೆಯುತ್ತಿವೆ. ಇದು ಸರಿಯಲ್ಲ ಎಂದು ಹೇಳಬೇಕಾದ ಸ್ವಾಮೀಜಿಗಳೇ ಸುಮ್ಮನಿದ್ದಾರೆ. ಅವರಿಗೂ ಈ ಜಾತಿ ವ್ಯವಸ್ಥೆ ಬೇಕಿದೆ ಎಂದು ಕಾಣುತ್ತದೆ. ಖಾವಿ ಧರಿಸಿದವರು ಮನುಷ್ಯರಾಗಬೇಕು ಮತ್ತು ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಬೇಕು’ ಎಂದು ತಿಳಿಸಿದರು.

ADVERTISEMENT

‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಜಾತಿ ವಿನಾಶಕ್ಕಾಗಿ ಜಾತಿಯನ್ನು ಬಳಸಬೇಕು. ಆದರೆ, ಜಾತಿ ದೃಢೀಕರಣಕ್ಕೆ ಬಳಸಲಾಗುತ್ತಿದೆ. ಜಾತಿ ಹೆಸರಿನ ಎಲ್ಲ ಸಂಸ್ಥೆಗಳನ್ನು ತೊಡೆದುಹಾಕಬೇಕು. ಸರ್ಕಾರ ಜಾತಿ ರಹಿತ ಅಭಿವೃದ್ಧಿಗೆ ಒತ್ತು ನೀಡಬೇಕು. ಜಾತಿಗೊಂದು ಸ್ಮಶಾನ ಮಾಡಬಾರದು. ಎಲ್ಲ ಜಾತಿ, ಧರ್ಮಗಳಿಗೆ ಒಂದೇ ಸ್ಮಶಾನ ಮಾಡಬೇಕು’ ಎಂದು ಸಲಹೆ ನೀಡಿದರು.

‘ಪೂನಾ ಒಪ್ಪಂದಕ್ಕೆ ಅಂಬೇಡ್ಕರ್‌ ಸಹಿ ಹಾಕಬೇಕಾದ ಅನಿವಾರ್ಯವನ್ನು ಗಾಂಧೀಜಿ ಸೃಷ್ಟಿಸಿದ್ದರಿಂದ ದಲಿತರಿಗೆ ಅನ್ಯಾಯವಾಗಿದ್ದು ನಿಜ. ಸಹಜವಾದ ಸಿಟ್ಟಿನಿಂದ ದಲಿತ ಸಂಘರ್ಷ ಸಮಿತಿ 80ರ ದಶಕದಲ್ಲಿ ಗಾಂಧೀಜಿಯನ್ನು ಟೀಕೆ ಮಾಡಿತು. ಅಲ್ಲಿಯವರೆಗೆ ಬಹಿರಂಗವಾಗಿ ಗಾಂಧೀಜಿಯ ವಿರುದ್ಧ ಮಾತನಾಡದ ಕೋಮು ಶಕ್ತಿಗಳಿಗೆ ಧೈರ್ಯ ಬರಲು ಇದು ಕಾರಣವಾಯಿತು. ಗಾಂಧೀಜಿಯನ್ನು ಖಳನಾಯಕನಂತೆ, ಗೋಡ್ಸೆಯನ್ನು ನಾಯಕನಂತೆ ಬಿಂಬಿಸಲು ಶುರು ಮಾಡಿದರು. ಹಾಗಾಗಿ ದಲಿತರು ಸೂಕ್ಷ್ಮವಾಗಿರದೇ ಹೋದರೆ ನಮ್ಮ ವಿರೋಧಿ ಶಕ್ತಿಗಳನ್ನು ಬಡಿದೆಬ್ಬಿಸಿದಂತಾಗುತ್ತದೆ ಎಂಬ ಎಚ್ಚರ ಇರಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.