
ಕೋಗಿಲು ಬಂಡೆ ಬಳಿ 5 ಎಕರೆ ಜಾಗದಲ್ಲಿದ್ದ ಶೆಡ್‌ಗಳನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ತೆರವುಗೊಳಿಸಿತು
ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಂಡೆ ಬಳಿ 5 ಎಕರೆ ಜಾಗದಲ್ಲಿದ್ದ 150ಕ್ಕೂ ಅಧಿಕ ಶೆಡ್‌ಗಳನ್ನು ತೆರವುಗೊಳಿಸಿ, ಜಾಗ ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕರೀಗೌಡ ತಿಳಿಸಿದ್ದಾರೆ.
ಯಲಹಂಕ ಹೋಬಳಿಯ ಕೋಗಿಲು ಗ್ರಾಮದ ಸರ್ವೆ ನಂ. 99 ರಲ್ಲಿ ಲಭ್ಯವಿರುವ ಒಟ್ಟು 14 ಎಕರೆ 36 ಗುಂಟೆ ವಿಸ್ತೀರ್ಣದ ಜಮೀನಿನಲ್ಲಿ, ಬಿಎಸ್‌ಡಬ್ಲ್ಯುಎಂಎಲ್ ವತಿಯಿಂದ ಪ್ರಸ್ತಾವಿತ ಬಯೋ ಮೆಥನೈಸೇಶನ್ ಪ್ಲಾಂಟ್, ಅನಿಮಲ್ ರೆಂಡರಿಂಗ್, ಎಳನೀರು ಬುರುಡೆ ಸಂಸ್ಕರಣಾ ಮತ್ತು ಸ್ಯಾನಿಟರಿ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಯೋಜಿಸಲಾಗಿತ್ತು.
ಬಿಎಸ್‌ಡಬ್ಲ್ಯುಎಂಎಲ್‌ಗೆ ಮೀಸಲಿರಿಸಿದ್ದ ಜಾಗದಲ್ಲಿ 150ಕ್ಕೂ ಹೆಚ್ಚು ಶೆಡ್/ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಅಧಿಕಾರಿಗಳ ತಂಡವು ಶನಿವಾರ ಒಂಬತ್ತು ಟ್ರ್ಯಾಕ್ಟರ್, ಒಂಬತ್ತು ಜೆಸಿಬಿ ಯಂತ್ರಗಳನ್ನು ಬಳಸಿ ಒತ್ತುವರಿ ತೆರವುಗೊಳಿಸಿದರು.
ಬಿಎಸ್‌ಡಬ್ಲ್ಯುಎಂಎಲ್, ಅಗ್ನಿಶಾಮಕ, ಪಾಲಿಕೆ, ಕಂದಾಯ ಇಲಾಖೆ, ಬಿಎಂಟಿಎಫ್ ಅಧಿಕಾರಿಗಳು, 70 ಮಾರ್ಷಲ್‍ಗಳು ಹಾಗೂ 200 ಮಂದಿ ಪೊಲೀಸ್ ಭದ್ರತೆಯೊಂದಿಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು.
ಅನಧಿಕೃತ ಕಟ್ಟಡ ನಿರ್ಮಾಣದ ತೆರವು
ಬೆಂಗಳೂರು ಪೂರ್ವ ನಗರ ಪಾಲಿಕೆಯ ದೊಡ್ಡನೆಕ್ಕುಂದಿ ವಾರ್ಡ್‌ನ ಚಿನ್ನಪ್ಪನಹಳ್ಳಿ 6ನೇ ‘ಸಿ’ ಅಡ್ಡರಸ್ತೆಯಲ್ಲಿ ಯಾವುದೇ ಅನುಮತಿ ಪಡೆಯದೇ ನಿರ್ಮಿಸುತ್ತಿದ್ದ ಕಟ್ಟಡವನ್ನು ಶನಿವಾರ ತೆರವುಗೊಳಿಸಲಾಗಿದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ನಗರ ಪಾಲಿಕೆಯಿಂದ ನಕ್ಷೆ ಮಂಜೂರಾತಿ ಪಡೆಯದೇ ಮಾಲೀಕರಾದ ರಮೇಶ್ ಮತ್ತು ವೀಣಾ ಅವರು ಕಟ್ಟಡ ನಿರ್ಮಿಸುತ್ತಿದ್ದರು. ಅನುಮತಿ ಪಡೆಯುವವರೆಗೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ನೋಟಿಸ್ ನೀಡಲಾಗಿತ್ತು. ಕಟ್ಟಡ ತೆರವುಗೊಳಿಸಬೇಕು. ಇಲ್ಲವೇ ಸರಿಯಾದ ಸಮಜಾಯಿಷಿ ನೀಡಬೇಕು ಎಂದು ಸೂಚಿಸಲಾಗಿತ್ತು. ಕಟ್ಟಡ ಮಾಲೀಕರು ಯಾವುದೇ ವಿವರಣೆ ನೀಡಿರಲಿಲ್ಲ. ಪಾಲಿಕೆಯ ಕಾಮಗಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ನೇತೃತ್ವದಲ್ಲಿ ಕಾರ್ಯಾಚರಣೆಯ ನಡೆಸಲಾಯಿತು. ಮೊದಲ ಹಂತವಾಗಿ ಕಟ್ಟಡದ ಮೂರನೇ ಮಹಡಿಯನ್ನು ತೆರವುಗೊಳಿಸಲಾಯಿತು. ಮುಂದಿನ ಹಂತದಲ್ಲಿ ಪೂರ್ಣ ಕಟ್ಟಡ ತೆರವುಗೊಳಿಸಲಾಗುವುದು ಎಂದು ಡಿ.ಎಸ್.ರಮೇಶ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.