ADVERTISEMENT

300ಕ್ಕೂ ಹೆಚ್ಚು ಬಾರಿ ರೂಲ್ಸ್‌ ಬ್ರೇಕ್‌: ಬೈಕ್ ಸವಾರನಿಗೆ ₹3 ಲಕ್ಷ ದಂಡ!

ಹೆಲ್ಮೆಟ್ ಧರಿಸದೇ ಮೊಬೈಲ್‌ನಲ್ಲಿ ಮಾತನಾಡುತ್ತ ದ್ವಿಚಕ್ರ ವಾಹನ ಚಲಾಯಿಸಿದ್ದ ಸವಾರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 13:58 IST
Last Updated 11 ಫೆಬ್ರುವರಿ 2024, 13:58 IST
<div class="paragraphs"><p>ಸಾಂದರ್ಭಿಕ&nbsp; ಚಿತ್ರ</p></div>

ಸಾಂದರ್ಭಿಕ  ಚಿತ್ರ

   

ಬೆಂಗಳೂರು: ನಗರದಲ್ಲಿ 300ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ ಆರೋಪದಡಿ ದ್ವಿಚಕ್ರ ವಾಹನವೊಂದರ ಮೇಲೆ ₹ 3.04 ಲಕ್ಷ ದಂಡ ವಿಧಿಸಲಾಗಿದ್ದು, ಬಾಕಿ ದಂಡ ಪಾವತಿಗೆ ಪೊಲೀಸರು ಗಡುವು ನೀಡಿದ್ದಾರೆ.

‘ಸುಧಾಮನಗರ ನಿವಾಸಿಯೊಬ್ಬರ ಹೆಸರಿನಲ್ಲಿರುವ ಆಕ್ಟಿವ್ ಹೊಂಡಾ ದ್ವಿಚಕ್ರ ವಾಹನದ (ಕೆಎ 05 ಕೆಎಫ್ 7969) ಮೇಲೆ ₹ 3.04 ಲಕ್ಷ ದಂಡ ಬಾಕಿ ಇದೆ. ಇದರ ವಸೂಲಿಗಾಗಿ ನಿವಾಸಿಗೆ ಮನೆಗೆ ಹೋಗಿ ನೋಟಿಸ್ ನೀಡಲಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಹೆಲ್ಮೆಟ್ ರಹಿತ ಚಾಲನೆ, ಸವಾರಿ ವೇಳೆ ಮೊಬೈಲ್‌ ಬಳಕೆ, ಸಿಗ್ನಲ್ ಜಂಪ್ ಸೇರಿದಂತೆ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಲಾಗಿದೆ. ₹50 ಸಾವಿರ ಮೇಲ್ಪಟ್ಟು ದಂಡ ಬಾಕಿ ಉಳಿಸಿಕೊಂಡವರ ಮನೆಗಳಿಗೆ ಹೋಗಿ, ದಂಡ ವಸೂಲಿ ಮಾಡಲಾಗುತ್ತಿದೆ. ಇದರ ಭಾಗವಾಗಿ, ಸುಧಾಮನಗರ ನಿವಾಸಿ ಮನೆಗೂ ಹೋಗಿ ಬರಲಾಗಿದೆ’ ಎಂದು ತಿಳಿಸಿದರು.

ದ್ವಿಚಕ್ರ ವಾಹನ ಜಪ್ತಿಗೆ ಒಪ್ಪದ ಪೊಲೀಸರು

‘ದ್ವಿಚಕ್ರ ವಾಹನ ಮಾಲೀಕನ ಮನೆಗೆ ಹೋಗಿದ್ದ ಪೊಲೀಸರು, ದಂಡ ತುಂಬುವಂತೆ ಹೇಳಿದ್ದರು. ಅಷ್ಟು ಹಣವಿಲ್ಲವೆಂದು ಹೇಳಿದ್ದ ಮಾಲೀಕ, ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿ ಕೊಂಡೊಯ್ಯುವಂತೆ ಹೇಳಿದ್ದರು. ಆದರೆ, ಪೊಲೀಸರು ಅದಕ್ಕೆ ಒಪ್ಪಿಲ್ಲ. ದಂಡ ಪಾವತಿ ಕಡ್ಡಾಯ. ಇಲ್ಲದಿದ್ದರೆ, ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸವಾರ, ದಂಡ ಪಾವತಿಸಲು ಸಮಯ ಪಡೆದುಕೊಂಡಿದ್ದಾರೆ’ ಎಂದು ಅಧಿಕಾರಿ ಹೇಳಿದರು.

‘ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ದಂಡ ಬಾಕಿ ಉಳಿಸಿಕೊಂಡಿರುವ ಜನರು, ಕೂಡಲೇ ದಂಡ ಪಾವತಿ ಮಾಡಬೇಕು. ಇಲ್ಲದಿದ್ದರೆ, ಪೊಲೀಸರು ಮನೆ ಬಾಗಿಲಿಗೆ ಬಂದು ದಂಡ ವಸೂಲಿ ಮಾಡಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.