ADVERTISEMENT

ಬೆಂಗಳೂರು: 50ಕ್ಕೂ ಹೆಚ್ಚು ಹೊಸ ಇಂದಿರಾ ಕ್ಯಾಂಟೀನ್‌

ಆಹಾರ ಕ್ರಮದಲ್ಲಿ ಬದಲಾವಣೆ; ಜನನಿಬಿಡ ಪ್ರದೇಶದಲ್ಲಿ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 12 ಜೂನ್ 2023, 16:33 IST
Last Updated 12 ಜೂನ್ 2023, 16:33 IST
ಇಂದಿರಾ ಕ್ಯಾಂಟೀನ್‌ ಸಾಂದರ್ಭಿಕ ಚಿತ್ರ
ಇಂದಿರಾ ಕ್ಯಾಂಟೀನ್‌ ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಹೊಸದಾಗಿ 50ಕ್ಕೂಹೆಚ್ಚು ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಬೇಕು. ಈಗಿರುವ ಕ್ಯಾಂಟೀನ್‌ಗಳು ಯಾವುದೇ ಸಮಸ್ಯೆ ಇಲ್ಲದೆ ಕಾರ್ಯಗತವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳ ಮರು ಕಾರ್ಯಾಚರಣೆ ಹಾಗೂ ಅಲ್ಲಿ ಯಾವ ರೀತಿ ಆಹಾರ ನೀಡಬೇಕು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಅವರು ಸೋಮವಾರ ಸಭೆ ನಡೆಸಿದರು.

ಬೆಂಗಳೂರಿನಲ್ಲಿ ಕನಿಷ್ಠ 250 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸಬೇಕು. ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಸರ್ಕಾರದಿಂದ ಶೇ 30ರಷ್ಟು ವೆಚ್ಚ ಭರಿಸಲಾಗುತ್ತಿತ್ತು. ಇನ್ನು ಮುಂದೆ ಶೇ 50ರಷ್ಟು ವೆಚ್ಚವನ್ನು ಸರ್ಕಾರ ಭರಿಸಲಿದೆ. ಕೂಡಲೇ ಎಲ್ಲವೂ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಇಂದಿರಾ ಕ್ಯಾಂಟೀನ್‌ನಲ್ಲಿ ದೊರೆಯುವ ಆಹಾರದ ಕ್ರಮವನ್ನು ಬದಲಾಯಿಸುತ್ತಿದ್ದು, ಗುಣಮಟ್ಟ, ಪ್ರಮಾಣ ಹಾಗೂ ಶುಚಿತ್ವ ಕಾಪಾಡಲು ಸೂಚಿಸಲಾಗಿದೆ. ದರ ಪರಿಷ್ಕರಣೆ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕಾಲೇಜು, ಆಸ್ಪತ್ರೆ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ತಾಲ್ಲೂಕು ಕಚೇರಿ ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್‌ ಸ್ಥಾಪಿಸುವ ಕುರಿತು ಪ್ರಸ್ತಾವ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಅಧಿಕಾರಿಗಳಿಗೆ ಸೂಚನೆ:

* ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ, ಸುಸ್ಥಿತಿ ಮತ್ತು ಕಾರ್ಯನಿರ್ವಹಣೆ ಕುರಿತು ವರದಿ ಸಲ್ಲಿಸಬೇಕು. ದುರಸ್ತಿ ಅಗತ್ಯ ಇರುವಲ್ಲಿ ಕೂಡಲೇ ಕ್ರಮ ಕೈಗೊಂಡು, ಸುಸ್ಥಿತಿಯಲ್ಲಿರಬೇಕು.

* ಆಹಾರದ ಗುಣಮಟ್ಟ ಕಾಯ್ದುಕೊಳ್ಳಬೇಕು. ನಿಗದಿ ಪಡಿಸಿದ ಮೆನುವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ವಚ್ಛತೆ, ಗುಣಮಟ್ಟ ಹಾಗೂ ಪ್ರಮಾಣದಲ್ಲಿ ಯಾವುದೇ ರಾಜಿ ಮಾಡಕೊಳ್ಳಬಾರದು.

* ಸಚಿವರು, ಶಾಸಕರನ್ನು ಉಪಾಹಾರಕ್ಕೆ ಆಹ್ವಾನಿಸಬೇಕು. ಅವರು ಆಗಾಗ್ಗೆ ಆಹಾರ ಸೇವಿಸಿದರೆ ಗುಣಮಟ್ಟ ಕಾಪಾಡಿಕೊಳ್ಳಲು ಅನುಕೂಲ.

7 ದಿನದಲ್ಲಿ ಟೆಂಡರ್‌ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ವಲಯವಾರು ಟೆಂಡರ್‌ಗಳನ್ನು ಏಳು ದಿನಗಳಲ್ಲಿ ಕರೆಯಲಾಗುತ್ತದೆ. ಎಲ್ಲವೂ ನಿಯಮಾನುಸಾರ ಶೀಘ್ರ ಕಾರ್ಯಾರಂಭ ಮಾಡಲಿವೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕಚಂದ್ರ ತಿಳಿಸಿದರು. 177ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಮೊಬೈಲ್‌ ಕ್ಯಾಂಟೀನ್‌ಗಳಿವೆ. ಈ ಮೊದಲು ವಾರ್ಡ್‌ಗೆ ಒಂದರಂತೆ ಆರಂಭಿಸಲಾಗಿತ್ತು. ಹಲವು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಈಗ ಎಲ್ಲವನ್ನೂ ದುರಸ್ತಿಗೊಳಿಸಿ ಕಾರ್ಯಾರಂಭ ಮಾಡುತ್ತೇವೆ’ ಎಂದರು. ₹100 ಕೋಟಿ ವೆಚ್ಚ ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಇದೀಗ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ₹70 ಕೋಟಿಯಿಂದ ₹80 ಕೋಟಿ ವೆಚ್ಚವಾಗುತ್ತಿದೆ. ಇನ್ನೂ 50 ಕ್ಯಾಂಟೀನ್‌ಗಳು ಹೆಚ್ಚಾಗುವುದರಿಂದ ಸುಮಾರು 250 ಕ್ಯಾಂಟೀನ್‌ಗಳ ನಿರ್ವಹಣೆಗೆ ಸುಮಾರು ₹100 ಕೋಟಿ ವೆಚ್ಚವಾಗಬಹುದು’ ಎಂದು ತ್ರಿಲೋಕಚಂದ್ರ ತಿಳಿಸಿದರು. ‘ಹೊಸದಾಗಿ 50 ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಲು ಸುಮಾರು ₹20 ಕೋಟಿ ವೆಚ್ಚವಾಗಲಿದೆ. ಇದರನ್ನು ಸರ್ಕಾರ ಭರಿಸಲಿದೆ. ಹೊಸ ಕ್ಯಾಂಟೀನ್‌ಗಳ ನಿರ್ಮಾಣಕ್ಕೂ ಟೆಂಡರ್‌ ಕರೆಯಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.