ADVERTISEMENT

PUC Results | ಮಗನ ಜತೆಗೆ ಅಮ್ಮನೂ ಪಾಸು

ಬಾಲಕೃಷ್ಣ ಪಿ.ಎಚ್‌
Published 8 ಏಪ್ರಿಲ್ 2025, 21:45 IST
Last Updated 8 ಏಪ್ರಿಲ್ 2025, 21:45 IST
ಕರಿಯಮ್ಮ ಪಿ.ಜಿ.
ಕರಿಯಮ್ಮ ಪಿ.ಜಿ.   

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿ 20 ವರ್ಷಗಳ ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ತಾಯಿ ಮತ್ತು ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಮಗ ಇಬ್ಬರೂ ಉತ್ತೀರ್ಣರಾಗಿದ್ದಾರೆ. ತಾಯಿ, ಮಗ ಏಕಕಾಲದಲ್ಲಿ ಉತ್ತೀರ್ಣರಾಗಿರುವುದು ಅವರ ಮನೆಯಲ್ಲಿ ಸಂಭ್ರಮವನ್ನು ಉಂಟು ಮಾಡಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಬ್ಬಗುಂಟೆ ಅಂಗನವಾಡಿ ಸಹಾಯಕಿ ಕರಿಯಮ್ಮ ಪಿ.ಜಿ. ಮತ್ತು ಯಶವಂತ ಎಚ್‌. ಒಟ್ಟಿಗೆ ಪಿಯುಸಿ ತೇರ್ಗಡೆ ಹೊಂದಿರುವ ತಾಯಿ-ಮಗ.

ಶಿರಾ ತಾಲ್ಲೂಕಿನ ಪುರಲೇಹಳ್ಳಿ ಗಿರಿಯಪ್ಪ–ಪುಟ್ಟಮ್ಮ ದಂಪತಿಯ ಮೂರನೇ ಮಗಳಾದ ಕರಿಯಮ್ಮ ಅವರು ಎಸ್‌ಎಸ್‌ಎಲ್‌ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದರು. ಬಡತನದಿಂದಾಗಿ ವಿದ್ಯಾಭ್ಯಾಸ ನಿಲ್ಲಿಸಿ ಹೆತ್ತವರೊಂದಿಗೆ ಕೂಲಿ ಕೆಲಸ ಶುರು ಮಾಡಿದ್ದರು. ಒಂದು ವರ್ಷದ ನಂತರ ದಬ್ಬಗುಂಟೆ ಹನುಮಂತರಾಜು ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ನಾಲ್ಕು ವರ್ಷದ ಹಿಂದೆ ಕೋವಿಡ್‌ನಿಂದ ಹನುಮಂತರಾಜು ಮೃತಪಟ್ಟಿದ್ದರು.

ADVERTISEMENT

ಮಕ್ಕಳಾದ ಯಶವಂತ ಮತ್ತು ರೋಹಿತ್‌ ಅವರನ್ನು ಸಾಕಲು ಕಷ್ಟವಾಗಿದ್ದ ಸಮಯದಲ್ಲಿ ಊರಿನ ಅಂಗನವಾಡಿಯಲ್ಲಿ ಸಹಾಯಕಿಯಾಗಿ ನೇಮಕಗೊಂಡಿದ್ದರು. ಸುತ್ತಮುತ್ತಲಿನ ನಾಲ್ಕೈದು ಅಂಗನವಾಡಿಗಳ ಸಹಾಯಕಿಯರೆಲ್ಲ ಗೆಳತಿಯರಾಗಿದ್ದು, ಎಲ್ಲರೂ ಪಿಯು ಪರೀಕ್ಷೆ ಬರೆಯಲು ನಿರ್ಧರಿಸಿದ್ದರು. ಅವರೊಂದಿಗೆ ಕರಿಯಮ್ಮ ಕೂಡ ಪರೀಕ್ಷೆ ಕಟ್ಟಿದ್ದರು. ಆಂತರಿಕ ಅಂಕಗಳಿಲ್ಲದೇ 251 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಅವರೊಂದಿಗೆ ಪರೀಕ್ಷೆ ಬರೆದಿದ್ದ ಗೆಳತಿಯರು ಕೂಡ ತೇರ್ಗಡೆ ಹೊಂದಿದ್ದಾರೆ.

‘ನಾನು ಕಲಾ ವಿಭಾಗದಲ್ಲಿ ಪರೀಕ್ಷೆ ಕಟ್ಟಿದ್ದೆ. ಕೆಂಕೆರೆ ಸರ್ಕಾರಿ ಪಿಯು ಕಾಲೇಜು ಪರೀಕ್ಷಾ ಕೇಂದ್ರವಾಗಿತ್ತು. ಮಗ ಯಶವಂತ ಕೋಡಿಮುದ್ದನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜಿನಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಂಡು ಓದುತ್ತಿದ್ದ. ಅವನು ಶೇ 80ಕ್ಕೂ (485) ಅಧಿಕ ಅಂಕ ಪಡೆದಿದ್ದಾನೆ. ಯಾವುದೇ ಪುಸ್ತಕಗಳಿಲ್ಲದೇ ಗೂಗಲ್‌, ಯೂಟ್ಯೂಬ್‌ಗಳನ್ನು ನೋಡಿಕೊಂಡು, ಬೇರೆಯವರಿಂದ ಪ್ರಶ್ನೆಪತ್ರಿಕೆ ತರಿಸಿಕೊಂಡು ಅಂಗನವಾಡಿ ಕೆಲಸ, ಮನೆ ಕೆಲಸದ ನಡುವೆ ಸ್ವಲ್ಪ ಓದಿದ್ದೆ. ಒಂದೇ ಬಾರಿಗೆ ಉತ್ತೀರ್ಣಳಾಗಿರುವುದು ಬಹಳ ಖುಷಿಯಾಗಿದೆ’ ಎಂದು ಕರಿಯಮ್ಮ ಅವರು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ಯಶವಂತ ಎಚ್‌.

‘ಇದಕ್ಕಿಂತ ದೊಡ್ಡ ಸಂತೋಷವೇನಿದೆ?’

‘ಅವ್ವ ನನ್ನ ಜತೆ ನೀನೂ ಪಾಸಾಗಿದ್ದಿ ಎಂದು ಮಗ ಯಶವಂತ ಹೇಳಿದಾಗ ಉಂಟಾದ ಅನುಭೂತಿಗಿಂತ ಬೇರೆ ಸಂತೋಷ ಏನಿದೆ? ಇನ್ನೊಬ್ಬ ಮಗ ರೋಹಿತ್‌ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾನೆ. ಮಕ್ಕಳಿಬ್ಬರನ್ನು ಓದಿಸಿ ಒಳ್ಳೆಯ ಸ್ಥಾನ ಪಡೆಯುವಂತೆ ಮಾಡಬೇಕು. ಬಡತನ ನನ್ನ ಕಾಲಕ್ಕೆ ಮುಗಿಯಬೇಕು’ ಎಂದು ಕರಿಯಮ್ಮ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.