ADVERTISEMENT

ದಿಶಾ ರವಿಗೆ ಮೌಂಟ್‌ ಕಾರ್ಮೆಲ್‌ ಕಾಲೇಜಿನ ಹಳೆವಿದ್ಯಾರ್ಥಿಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 20:54 IST
Last Updated 17 ಫೆಬ್ರುವರಿ 2021, 20:54 IST

ಬೆಂಗಳೂರು: ರೈತರ ಪ್ರತಿಭಟನೆ ಬೆಂಬಲಿಸಿ ಟೂಲ್‌ ಕಿಟ್‌ ಸಿದ್ಧಪಡಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ದಿಶಾ ರವಿ ಅವರ ಬೆಂಬಲಕ್ಕೆ ಮೌಂಟ್‌ ಕಾರ್ಮೆಲ್‌ ಕಾಲೇಜಿನ ಹಳೆವಿದ್ಯಾರ್ಥಿಗಳು ಧಾವಿಸಿದ್ದಾರೆ. ದಿಶಾ ಅವರನ್ನು ಬಂಧಿಸಿರುವ ದೆಹಲಿ ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.

‘ದೆಹಲಿ ಪೊಲೀಸರು ದಿಶಾ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಬೆಂಗಳೂರು ಪೊಲೀಸರು ಹಾಗೂ ಕರ್ನಾಟಕ ಸರ್ಕಾರವು ಅವರಿಗೆ ರಕ್ಷಣೆ ಒದಗಿಸಬೇಕು’ ಎಂದು ಒತ್ತಾಯಿಸಿ, 330 ವಿದ್ಯಾರ್ಥಿಗಳು ಪತ್ರಕ್ಕೆ ಸಹಿ ಹಾಕಿದ್ದಾರೆ.

‘ಮೌಂಟ್‌ ಕಾರ್ಮೆಲ್‌ ಕಾಲೇಜಿನ ವಿದ್ಯಾರ್ಥಿನಿಯಾಗಿ, ದೇಶದ ಪ್ರಜ್ಞಾವಂತ ಪ್ರಜೆಯಾಗಿ ದಿಶಾ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ‘ಫ್ರೈಡೇ ಫಾರ್‌ ಫ್ಯೂಚರ್‌’ ಸಂಸ್ಥೆಯ ಸಹಸಂಸ್ಥಾಪಕಿಯಾಗಿರುವ ಅವರು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದರು. ಅದೇ ರೀತಿಯಲ್ಲಿಯೇ, ರೈತರ ಪ್ರತಿಭಟನೆಗೂ ಬೆಂಬಲ ವ್ಯಕ್ತಪಡಿಸಿದ್ದರು’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ADVERTISEMENT

‘ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ದಿಶಾ ಅವರ ಹೋರಾಟ ಮತ್ತು ಅವರ ಸಾಮಾಜಿಕ ಕಳಕಳಿಯ ಬಗ್ಗೆ ಮೌಂಟ್ ಕಾರ್ಮೆಲ್ ಕಾಲೇಜು ಹೆಮ್ಮೆ ವ್ಯಕ್ತಪಡಿಸುತ್ತದೆ’ ಎಂದೂ ಹಳೆವಿದ್ಯಾರ್ಥಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.