ADVERTISEMENT

ಎಂಎಸ್‌ಪಿ ಯೋಜನೆ ಗಡುವು ಮುಗಿಯಲು 20 ದಿನ ಬಾಕಿ | ಖರೀದಿ ವಿಳಂಬ: ರೈತರು ಕಂಗಾಲು

ಸುಬ್ರಹ್ಮಣ್ಯ ವಿ.ಎಸ್‌.
Published 10 ಮಾರ್ಚ್ 2024, 23:59 IST
Last Updated 10 ಮಾರ್ಚ್ 2024, 23:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಂದ ಭತ್ತ, ರಾಗಿ ಮತ್ತು ಜೋಳ ಖರೀದಿಸುವ ಪ್ರಕ್ರಿಯೆಯ ಗಡುವು ಮುಗಿಯಲು ಕೇವಲ 20 ದಿನಗಳು ಬಾಕಿ ಉಳಿದಿದ್ದು, ರಾಜ್ಯದಲ್ಲಿ ಖರೀದಿಯೇ ಆರಂಭವಾಗಿಲ್ಲ. ಇದರಿಂದ ಲಕ್ಷಾಂತರ ರೈತರು ಕಂಗಾಲಾಗಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಎಂಎಸ್‌ಪಿ ಯೋಜನೆ ಅಡಿಯಲ್ಲಿ 5.99 ಲಕ್ಷ ಟನ್‌ ರಾಗಿ, 2.5 ಲಕ್ಷ ಟನ್‌ ಭತ್ತ ಮತ್ತು 3 ಲಕ್ಷ ಟನ್‌ ಬಿಳಿ ಜೋಳ ಖರೀದಿಗೆ 2023ರ ನವೆಂಬರ್‌ನಲ್ಲೇ ಒಪ್ಪಿಗೆ ನೀಡಲಾಗಿತ್ತು. ‘ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆ’ಯಲ್ಲಿ (ಫ್ರೂಟ್ಸ್‌) ಅಡಿಯಲ್ಲಿ ಡಿಸೆಂಬರ್‌ 1 ರಿಂದ 31ರವರೆಗೆ ನೋಂದಣಿ ಪ್ರಕ್ರಿಯೆ ನಡೆದಿತ್ತು.

ADVERTISEMENT

2024ರ ಜನವರಿ 1 ರಿಂದ ರಾಜ್ಯದಾದ್ಯಂತ ಭತ್ತ, ರಾಗಿ ಮತ್ತು ಬಿಳಿ ಜೋಳದ ಖರೀದಿ ಪ್ರಕ್ರಿಯೆ ಆರಂಭವಾಗಬೇಕಿತ್ತು. ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಮಾರ್ಗಸೂಚಿಗಳ ಪ್ರಕಾರ, ಎಂಎಸ್‌ಪಿ ಯೋಜನೆಯಡಿ ಆಹಾರ ಧಾನ್ಯಗಳ ಖರೀದಿ ಪ್ರಕ್ರಿಯೆ ಮಾರ್ಚ್‌ 31 ಕ್ಕೆ ಮುಕ್ತಾಯವಾಗಲಿದೆ. ಗಡುವು ಮುಗಿಯಲು 20 ದಿನಗಳಷ್ಟೇ ಬಾಕಿ ಇದೆ.

ರಾಜ್ಯದ 31 ಜಿಲ್ಲೆಗಳಲ್ಲಿ ಎಂಎಸ್‌ಪಿ ಯೋಜನೆಯಡಿ ಆಹಾರ ಧಾನ್ಯಗಳನ್ನು ಖರೀದಿಸುವ ಜವಾಬ್ದಾರಿಯನ್ನು ಮೂರು ಸಂಸ್ಥೆಗಳಿಗೆ ನೀಡಲಾಗಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ 16 ಜಿಲ್ಲೆಗಳು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಒಂಬತ್ತು ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಆರು ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ.

ನೋಂದಣಿಗೆ ಸೀಮಿತ:

ಮೂರೂ ಸಂಸ್ಥೆಗಳು ತಮಗೆ ಹಂಚಿಕೆಯಾದ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಡಿಸೆಂಬರ್‌ 1 ರಿಂದಲೇ ಖರೀದಿ ಕೇಂದ್ರಗಳನ್ನು ತೆರೆದಿವೆ. ‘ಫ್ರೂಟ್ಸ್‌’ ತಂತ್ರಾಂಶದಲ್ಲಿನ ರೈತರ ದತ್ತಾಂಶದ ಆಧಾರದಲ್ಲಿ ಭತ್ತ, ರಾಗಿ ಮತ್ತು ಬಿಳಿ ಜೋಳ ಖರೀದಿಗೆ ನೋಂದಣಿಯನ್ನೂ ಮಾಡಿಕೊಳ್ಳಲಾಗಿದೆ. ಆದರೆ, ಜನವರಿ 1 ರಿಂದ ಈವರೆಗೆ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ.

‘ಎಂಎಸ್‌ಪಿ ಯೋಜನೆಯಡಿಯಲ್ಲೇ ಆಹಾರ ಧಾನ್ಯ ಮಾರಾಟ ಮಾಡಬೇಕೆಂದು ನೋಂದಣಿ ಮಾಡಿಸಿಕೊಂಡಿರುವ ರೈತರು ಖರೀದಿ ಆರಂಭವಾಗದೇ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪದೇ ಪದೇ ಖರೀದಿ ಕೇಂದ್ರಗಳಿಗೆ ಹೋದರೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಒಳ್ಳೆಯ ದರ ಇದ್ದರೂ ನಾವು ಆಹಾರ ಧಾನ್ಯ ಮಾರಾಟ ಮಾಡಿಲ್ಲ. ಮಾರ್ಚ್‌ 31ಕ್ಕೆ ಗಡುವು ಮುಗಿಯುವುದರೊಳಗೆ ಖರೀದಿಯೇ ಆಗದಿದ್ದರೆ ನಮ್ಮ ಗತಿ ಏನು’ ಎಂದು ರಾಗಿ ಮತ್ತು ಜೋಳ ಮಾರಾಟಕ್ಕೆ ನೋಂದಣಿ ಮಾಡಿಸಿಕೊಂಡಿರುವ ಹಲವು ರೈತರು ಆತಂಕದಿಂದ ಪ್ರಶ್ನಿಸುತ್ತಾರೆ.

‘ಹೊಸ ತಂತ್ರಾಂಶದಿಂದ ವಿಳಂಬ’: ಈ ಕುರಿತು ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತೆ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ, ‘ಈ ಬಾರಿ ಎಂಎಸ್‌ಪಿ ಯೋಜನೆಯಡಿ ಖರೀದಿಸುವ ಆಹಾರ ಧಾನ್ಯಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಜಿಪಿಎಸ್‌ ಆಧಾರದಲ್ಲಿ ವಾಹನಗಳ ಸಂಚಾರದ ಮೇಲೆ ನಿಗಾ ಇರಿಸುವ ಹೊಸ ತಂತ್ರಾಂಶವನ್ನು ರೂಪಿಸುತ್ತಿದ್ದು, ಅದರ ಪ್ರಾಯೋಗಿಕ ಅನುಷ್ಠಾನದಿಂದ ಖರೀದಿ ‍ಪ್ರಕ್ರಿಯೆ ವಿಳಂಬವಾಗಿದೆ’ ಎಂದರು.

‘ಜಿಪಿಎಸ್‌ ಆಧಾರಿತ ನಿಗಾ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆ ಮುಗಿದಿದೆ. ಈ ವಾರದಿಂದಲೇ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ರೈತರಿಗೆ ತೊಂದರೆ ಆಗದಂತೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಗಡುವು ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ಎಂಎಸ್‌ಪಿ ಯೋಜನೆಯಡಿ ಖರೀದಿ ಗುರಿ ಭತ್ತ 2.5 ಲಕ್ಷ ಟನ್‌ ರಾಗಿ 5.99 ಲಕ್ಷ ಟನ್‌ ಬಿಳಿ ಜೋಳ 3 ಲಕ್ಷ ಟನ್‌ –––– ಎಂಎಸ್‌ಪಿ ದರ (ಪ್ರತಿ ಕ್ವಿಂಟಲ್‌ಗೆ) ಭತ್ತ (ಸಾಮಾನ್ಯ);₹2,183 ಭತ್ತ (ಗ್ರೇಡ್‌–ಎ);₹2,203 ಬಿಳಿ ಜೋಳ (ಹೈಬ್ರಿಡ್);₹3,180 ಬಿಳಿ ಜೋಳ (ಮಾಲ್ದಂಡಿ);₹3,225 ರಾಗಿ;₹3,846
ಎಂಎಸ್‌ಪಿ ಯೋಜನೆಯಡಿ ಖರೀದಿ ವಿಳಂಬದಿಂದ ಮಧ್ಯವರ್ತಿಗಳು ಮತ್ತು ರೈತರ ಹೆಸರಿನಲ್ಲಿ ಅಕ್ರಮವಾಗಿ ಆಹಾರ ಧಾನ್ಯ ಮಾರುವವರಿಗೆ ಅನುಕೂಲವಾಗುತ್ತದೆ. ತಕ್ಷಣ ಖರೀದಿ ಆರಂಭಿಸಬೇಕು ಮತ್ತು ಗಡುವು ವಿಸ್ತರಿಸಬೇಕು.
ಬಡಗಲಪುರ ನಾಗೇಂದ್ರ ರಾಜ್ಯ ರೈತ ಸಂಘದ ಅಧ್ಯಕ್ಷ

ಬಡಗಲಪುರ ನಾಗೇಂದ್ರ‌

ಭತ್ತ ಮಾರುವವರೇ ಇಲ್ಲ
ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ 25 ಲಕ್ಷ ಕ್ವಿಂಟಲ್‌ ಭತ್ತ ಖರೀದಿಗೆ ಅವಕಾಶವಿದೆ. 118 ರೈತರು ಮಾತ್ರ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿದ್ದು ಕೇವಲ 3279 ಕ್ವಿಂಟಲ್‌ ಭತ್ತ ಖರೀದಿಗೆ ಲಭ್ಯವಿದೆ. ಬರಗಾಲದ ಕಾರಣದಿಂದ ರಾಜ್ಯದಲ್ಲಿ ಭತ್ತದ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಭತ್ತದ ದರ ಏರಿಕೆಯಾಗಿದೆ. ಎಂಎಸ್‌ಪಿ ದರಕ್ಕಿಂತ ಹೆಚ್ಚಿನ ದರ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕಾರಣದಿಂದಾಗಿ ರೈತರು ಖರೀದಿ ಕೇಂದ್ರಗಳತ್ತ ಮುಖ ಮಾಡಿಲ್ಲ.
ಎಂಎಸ್‌ಪಿ: ರೈತರ ನೋಂದಣಿ ವಿವರ
ಆಹಾರ ಧಾನ್ಯ;ರೈತರ ಸಂಖ್ಯೆ;ಪ್ರಮಾಣ(ಕ್ವಿಂಟಲ್‌ಗಳಲ್ಲಿ) ಭತ್ತ;118;3279 ರಾಗಿ;165418;3777878 ಬಿಳಿ ಜೋಳ;8089;331049

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.