ADVERTISEMENT

ಹೆಬ್ಬಾಳದಲ್ಲಿ ಬಹು ಮಾದರಿ ಸಾರಿಗೆ ಹಬ್‌: BMRCLಗೆ 45 ಎಕರೆ ಬದಲು 10ಎಕರೆ ಜಮೀನು!

ಜಮೀನು ನೀಡುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದ ಬಿಎಂಆರ್‌ಸಿಎಲ್‌

ಬಾಲಕೃಷ್ಣ ಪಿ.ಎಚ್‌
Published 6 ಮೇ 2025, 1:09 IST
Last Updated 6 ಮೇ 2025, 1:09 IST
ನಗರದ ಹೆಬ್ಬಾಳ ಮೇಲ್ಸೇತುವೆ ಬಳಿ ಉಂಟಾಗಿರುವ ವಾಹನ ದಟ್ಟಣೆ (ಸಾಂದರ್ಭಿಕ ಚಿತ್ರ)
ನಗರದ ಹೆಬ್ಬಾಳ ಮೇಲ್ಸೇತುವೆ ಬಳಿ ಉಂಟಾಗಿರುವ ವಾಹನ ದಟ್ಟಣೆ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಹೆಬ್ಬಾಳದಲ್ಲಿ ಬಹು ಮಾದರಿ ಸಾರಿಗೆ ‘ಹಬ್‌’ ನಿರ್ಮಿಸುವುದಕ್ಕಾಗಿ ಬಿಎಂಆರ್‌ಸಿಎಲ್‌ಗೆ ಕೆಐಎಡಿಬಿಯ ಜಮೀನು ನೀಡುವ ಪ್ರಸ್ತಾವ ಚರ್ಚೆಯ ಹಂತ ದಾಟುತ್ತಿಲ್ಲ. ಒಂದರ ಹಿಂದೆ ಒಂದು ಸಭೆ ನಡೆಸಿದರೂ ಅಂತಿಮ ತೀರ್ಮಾನ ಆಗುತ್ತಿಲ್ಲ. ಈ ಮಧ್ಯೆ 45 ಎಕರೆ ಬದಲು 9 ಅಥವಾ 10 ಎಕರೆ ಜಮೀನು ಮಾತ್ರ ನೀಡುವ ಕುರಿತು ಚರ್ಚೆ ಶುರುವಾಗಿದೆ.

ರೈಲು, ಮೆಟ್ರೊ ರೈಲು, ಉಪನಗರ ರೈಲು, ಬಿಎಂಟಿಸಿ ಬಸ್‌ಗಳು ಹಾದು ಹೋಗುವ ಹೆಬ್ಬಾಳದಲ್ಲಿ ಬಹು ಮಾದರಿ ಸಾರಿಗೆ ಹಬ್‌ ನಿರ್ಮಿಸಲು 45 ಎಕರೆ 5.5 ಗುಂಟೆ ಜಮೀನು ಅಗತ್ಯವಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) 55 ಎಕರೆ ಜಮೀನು ಇಲ್ಲಿದ್ದು, ಹಿಂದೆ ಬೇರೆ ಯೋಜನೆ ರೂಪಿಸಿದ್ದರೂ ಕಾರ್ಯಗತಗೊಂಡಿಲ್ಲ. ಹಾಗಾಗಿ ಬಹು ಮಾದರಿ ಸಾರಿಗೆ ಹಬ್‌ ನಿರ್ಮಾಣಕ್ಕೆ ಈ ಜಮೀನನ್ನು ಒದಗಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಬೆಂಗಳೂರು ಮೆಟ್ರೊ ರೈಲ್‌ ಕಾರ್ಪೊರೇಶನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಪ್ರಸ್ತಾವ ಸಲ್ಲಿಸಿತ್ತು.

ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌– ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೊ ನೀಲಿ ಮಾರ್ಗವು ಹೆಬ್ಬಾಳ ಮೂಲಕ ಹಾದುಹೋಗುತ್ತಿದ್ದು, ಕಾಮಗಾರಿ ನಡೆಯುತ್ತಿದೆ. ಜೆ.ಪಿ. ನಗರದಿಂದ ಕೆಂಪಾಪುರದವರೆಗಿನ ಮೆಟ್ರೊ ಮಾರ್ಗ (ಕಿತ್ತಳೆ ಮಾರ್ಗ), ಹೆಬ್ಬಾಳ–ಸರ್ಜಾಪುರ ಮಧ್ಯದ ಮೆಟ್ರೊ (ಕೆಂಪು) ಮಾರ್ಗವೂ ನಿರ್ಮಾಣಗೊಳ್ಳಲಿದೆ. ಮೂರು ಮೆಟ್ರೊ ಮಾರ್ಗಗಳು ಒಂದೆ ಕಡೆ ಸಂಧಿಸುವ ನಗರದ ಏಕೈಕ ಪ್ರದೇಶ ಇದಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ ಎರಡನೇ ಕಾರಿಡಾರ್‌ ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ಮಾರ್ಗ (ಮಲ್ಲಿಗೆ ಮಾರ್ಗ) ಕೂಡ ಇಲ್ಲಿಂದಲೇ ಹಾದು ಹೋಗುತ್ತಿದೆ. ಹೆಬ್ಬಾಳ ರೈಲು ನಿಲ್ದಾಣ, ಬಿಎಂಟಿಸಿ ಡಿಪೊ ಎಲ್ಲವೂ ಇಲ್ಲೇ ಸುತ್ತಮುತ್ತ ಇವೆ.

ADVERTISEMENT

ಹೆಬ್ಬಾಳ ಮತ್ತು ಹೆಬ್ಬಾಳ ಅಮಾನಿಕೆರೆಯಲ್ಲಿ ಬಹುಮಾದರಿ ಸಾರಿಗೆ ಸಂಪರ್ಕ ಕೇಂದ್ರ (ಹಬ್‌) ನಿರ್ಮಿಸಿದರೆ ವಾಹನ ದಟ್ಟಣೆ ಕಡಿಮೆಯಾಗಲಿದೆ. ಜಮೀನು ಒದಗಿಸಿಕೊಟ್ಟರೆ ಬಹು ಹಂತದ ಕಾರು ಪಾರ್ಕಿಂಗ್, ಆಧುನಿಕ ಡಿಪೊ ಮತ್ತು ಇತರ ಸಂಬಂಧಿತ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಜಮೀನು ಒದಗಿಸಿದರೆ ಎಕರೆಗೆ ₹ 12 ಕೋಟಿಯಂತೆ ಪಾವತಿಸಲು ಸಿದ್ಧ ಎಂದು ಬಿಎಂಆರ್‌ಸಿಎಲ್‌ ಒಂದು ವರ್ಷದ ಹಿಂದೆ ತಿಳಿಸಿತ್ತು.

ಆನಂತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಲವು ಬಾರಿ ಸಭೆ ನಡೆಸಿದ್ದರು. ಆದರೆ, ಪ್ರಸ್ತಾವವು ಮುಂದಿನ ಹಂತಕ್ಕೆ ಹೋಗಿರಲಿಲ್ಲ. ಸೋಮವಾರ ಮತ್ತೆ ಆಂತರಿಕ ಸಭೆ ನಡೆದಿದೆ. ಆದರೆ, ಯಾವುದೇ ತೀರ್ಮಾನವಾಗಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಸಭೆ

‘ಕೆಐಎಡಿಬಿಯ ಜಮೀನು ಆಗಿರುವುದರಿಂದ ಮತ್ತೆ ಪಡೆಯುವುದು ಕಷ್ಟದ ಕೆಲಸ. ಹಾಗಾಗಿ ಬಿಎಂಆರ್‌ಸಿಎಲ್‌ ಕೇಳಿದಷ್ಟು ಜಮೀನು ಒದಗಿಸುವುದು ಕಷ್ಟ. ಬಹು ಮಹಡಿ ಸಾರಿಗೆ ಹಬ್‌ ನಿರ್ಮಿಸಲು ಅಲ್ಲಿ ಹಾದು ಹೋಗುವ ನಾಲಾದ ಎರಡೂ ಬದಿಯಲ್ಲಿ ರಸ್ತೆ ನಿರ್ಮಿಸಲು ಬಹು ಸಾರಿಗೆಗಳಿಗೆ ಸಂಪರ್ಕ ಕಲ್ಪಿಸಲು ಪ್ರಯಾಣಿಕರಿಗೆ ಪಾರ್ಕಿಂಗ್‌ ಒದಗಿಸಲು ಎಷ್ಟು ಬೇಕು ಎಂಬುದನ್ನು ನಿಖರವಾಗಿ ತಿಳಿಸಬೇಕು. ಸುಮಾರು 10 ಎಕರೆ ಸಾಕಾಗಲಿದ್ದು ಅಷ್ಟನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಮತ್ತೊಂದು ಸಭೆ ನಡೆಸಲಾಗುವುದು ಎಂದು ಸಭೆಯಲ್ಲಿ ಉಪ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅಗತ್ಯ ಜಾಗ ಪಡೆಯುತ್ತೇವೆ’

‘ಹೆಬ್ಬಾಳ ಜಂಕ್ಷನ್ ಬಹಳ ಮುಖ್ಯವಾದ ಜಾಗ. ಇಲ್ಲಿ ಮೆಟ್ರೊ ಹಾಗೂ ಸುರಂಗ ಮಾರ್ಗ ಅವಶ್ಯವಿದೆ. ಹೀಗಾಗಿ ನಾವು ಅಗತ್ಯವಿರುವ ಜಾಗವನ್ನು ತೆಗೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಯೋಜನೆ ಹಿಂಪಡೆಯಲು ಸಾಧ್ಯವಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ‘ಮೆಟ್ರೊ ಹಾಗೂ ಸುರಂಗ ರಸ್ತೆಗೆ ಸಂಬಂಧಿಸಿದ ಅಧಿಕಾರಿಗಳು ಸೇರಿ ವಿನ್ಯಾಸ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಇದಕ್ಕೆ ಅಗತ್ಯವಿರುವ ಮಿಲಿಟರಿ ಜಾಗ ಹಾಗೂ ಖಾಸಗಿ ಜಾಗ ಎಷ್ಟು ಬೇಕು ಎಂದು ನಾವು ಚರ್ಚೆ ಮಾಡಿದ್ದೇವೆ. ಟಿಡಿಆರ್ ಅಥವಾ ಎಫ್‌ಎಆರ್ ಮೂಲಕ ಪರಿಹಾರ ನೀಡಲು ಬದ್ಧರಾಗಿದ್ದೇವೆ. ನಾವು ಈ ಜಾಗ ಬಿಟ್ಟು ಕೊಡಲು ಸಿದ್ದವಿಲ್ಲ‌’ ಎಂದು ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.