ADVERTISEMENT

ಬಹುಮಹಡಿ ಕಟ್ಟಡ ಕುಸಿತ: ಜೀವ ಉಳಿಸಿದ ನೀರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 19:10 IST
Last Updated 27 ಸೆಪ್ಟೆಂಬರ್ 2021, 19:10 IST
ಬೆಂಗಳೂರಿನ ಲಕ್ಕಸಂದ್ರದಲ್ಲಿ ಕುಸಿದ ಬಹುಮಹಡಿ ಕಟ್ಟಡ
ಬೆಂಗಳೂರಿನ ಲಕ್ಕಸಂದ್ರದಲ್ಲಿ ಕುಸಿದ ಬಹುಮಹಡಿ ಕಟ್ಟಡ   

ಬೆಂಗಳೂರು: ನಗರದ ಲಕ್ಕಸಂದ್ರದಲ್ಲಿ ಬಹುಮಹಡಿ‌ ಕಟ್ಟಡವೊಂದು ಸೋಮವಾರ ಕುಸಿದು ಬಿದ್ದಿದ್ದು, ಅಕ್ಕ–ಪಕ್ಕದ ಕಟ್ಟಡಗಳಿಗೆ ಧಕ್ಕೆಯಾಗಿದೆ.

ಸ್ಥಳೀಯ ನಿವಾಸಿ ಸುರೇಶ್‌ ಎಂಬುವರಿಗೆ ಸೇರಿದ್ದ ಮೂರು ಅಂತಸ್ತಿನ ಕಟ್ಟಡ ಇದಾಗಿತ್ತು. ಕಟ್ಟಡ ಕುಸಿದಿದ್ದ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
‘ಸ್ವಲ್ಪದರಲ್ಲೇ ಹಲವರ ಪ್ರಾಣ ಉಳಿದಿದೆ’ ಎಂದು ಹೇಳಿಕೊಂಡಿದ್ದಾರೆ.

‘50 ವರ್ಷ ಹಿಂದೆ ನಿರ್ಮಿಸಿದ್ದ ಕಟ್ಟಡದಲ್ಲಿ ಕೆಲ ತಿಂಗಳ ಹಿಂದಷ್ಟೇ ಬಿರುಕು ಕಾಣಿಸಿಕೊಂಡಿತ್ತು. ಕಟ್ಟಡದ ಸಮೀಪದಲ್ಲೇ ಮೆಟ್ರೊ ಕಾಮಗಾರಿ ಸಹ ನಡೆಯುತ್ತಿತ್ತು. ಕಾಮಗಾರಿಗೆ ಬಂದಿದ್ದ 10ಕ್ಕೂ ಹೆಚ್ಚು ಕಾರ್ಮಿಕರು, ಇದೇ ಕಟ್ಟಡದ ಕೊಠಡಿಗಳಲ್ಲಿ ಬಾಡಿಗೆಗೆ ಉಳಿದುಕೊಂಡಿದ್ದರು’ ಎಂದು ಸ್ಥಳೀಯರೊಬ್ಬರು ಹೇಳಿದರು.

ADVERTISEMENT

‘ಕಾರ್ಮಿಕರು ಸೋಮವಾರ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಇದೇ ವೇಳೆ ಕಟ್ಟಡ ಕುಸಿದಿದೆ. ಸಾಮಗ್ರಿ ಹಾಗೂ ಪೀಠೋಪಕರಣಗಳು ಅವಶೇಷಗಳಡಿ ಸಿಲುಕಿವೆ. ಅಕ್ಕ–ಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ. ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿವೆ. ಆದರೆ, ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವೆಂಬುದು ಸಮಾಧಾನಕರ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದ ಅವಶೇಷ ತೆರವು ಮಾಡುತ್ತಿದ್ದಾರೆ’ ಎಂದೂ ತಿಳಿಸಿದರು.

ನಿಧಾನವಾಗಿ ವಾಲುತ್ತಿದ್ದ ಕಟ್ಟಡ: ಸೋಮವಾರ ಮಧ್ಯಾಹ್ನ ಕಟ್ಟಡ ನಿಧಾನವಾಗಿ ರಸ್ತೆ ಕಡೆಗೆ ವಾಲುತ್ತಿತ್ತು. ಅದನ್ನು ಗಮನಿಸಿದ್ದ ಅಕ್ಕ- ಪಕ್ಕದ ನಿವಾಸಿಗಳು, ತಮ್ಮ ಮನೆಯಿಂದ ಹೊರಗೆ ಓಡಿ ಬಂದು ಸುರಕ್ಷಿತ ಸ್ಥಳದಲ್ಲಿ ನಿಂತುಕೊಂಡಿದ್ದರು. ನೋಡು ನೋಡುತ್ತಿದ್ದಂತೆ ಅವರ ಕಣ್ಣೆದುರೇ ಕಟ್ಟಡ ಕುಸಿದು ಬಿತ್ತು. ಅದರ ಧೂಳು ಇಡೀ ರಸ್ತೆಯನ್ನೇ ಆವರಿಸಿತ್ತು.

‘ಕಟ್ಟಡ ಕುಸಿಯುವ ಮುನ್ಸೂಚನೆ ಹಲವು ದಿನಗಳ ಹಿಂದೆಯೇ ಸಿಕ್ಕಿತ್ತು. ಈ ಬಗ್ಗೆ ಮಾಲೀಕರಿಗೆ ಹೇಳಿದರೂ ತಲೆಕೆಡಿಸಿಕೊಳ್ಳಲಿಲ್ಲ. ಪ್ರಾಣಭಯದಲ್ಲಿ ಜೀವನ ಸಾಗಿಸುತ್ತಿದ್ದೆವು. ಈಗ ನಮ್ಮ ಎದುರೇ ಕಟ್ಟಡ ಕುಸಿದಿದೆ’
ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.

ಕಾರ್ಮಿಕನ ಜೀವ ಉಳಿಸಿದ ನೀರು: ‘ಕಟ್ಟಡದ ಮೂರನೇ ಮಹಡಿಯ ಕೊಠಡಿಯಲ್ಲಿ ಸ್ನೇಹಿತರ ಜೊತೆ ವಾಸವಾಗಿದ್ದೆ. ಸೋಮವಾರ ಬೆಳಿಗ್ಗೆ ಎಲ್ಲರೂ ಕೆಲಸಕ್ಕೆ ಹೋಗಿದ್ದರು. ನಾನು ಒಬ್ಬನೇ ಕೊಠಡಿಯಲ್ಲಿದ್ದೆ’ ಎಂದು ಕಾರ್ಮಿಕರೊಬ್ಬರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

‘ಅಡುಗೆ ಮಾಡುವ ಜವಾಬ್ದಾರಿ ನನ್ನ ಮೇಲಿತ್ತು. ಮಧ್ಯಾಹ್ನ ಅಡುಗೆ ಮಾಡಲು ಆರಂಭಿಸಿದ್ದೆ. ನೀರು ಖಾಲಿಯಾಗಿತ್ತು. ನೀರು ತರಲೆಂದು ಕಟ್ಟಡದಿಂದ ಹೊರಬಂದು, ಸಮೀಪದಲ್ಲೇ ಇದ್ದ ಮತ್ತೊಂದು ಕಟ್ಟಡದ ನಳದ ಬಳಿ ಹೋಗಿದ್ದೆ. ಕ್ಯಾನ್‌ನಲ್ಲಿ ನೀರು ತುಂಬಿಸುತ್ತಿದ್ದ ವೇಳೆಯಲ್ಲಿ ಕಟ್ಟಡ ಕುಸಿದು ಬಿತ್ತು’ ಎಂದೂ ಹೇಳಿದ್ದಾರೆ.

‘ನೀರು ತರಲು ಹೊರಗಡೆ ಬರದಿದ್ದರೆ, ನನ್ನ ಜೀವವೂ ಹೋಗುತ್ತಿತ್ತು. ಕಟ್ಟಡ ಕುಸಿದಿದ್ದರಿಂದ ನಾನು ಮೃತಪಟ್ಟಿರಬಹುದೆಂದು ತಿಳಿದ ಸ್ನೇಹಿತರು, ಸ್ಥಳಕ್ಕೆ ಬಂದು ನನಗಾಗಿ ಹುಡುಕಾಡುತ್ತಿದ್ದರು. ನನ್ನನ್ನು ನೋಡಿದ ಮೇಲೆ ಅವರಿಗೆ ಸಮಾಧಾನವಾಯಿತು’ ಎಂದೂ ಕಾರ್ಮಿಕ ಪೊಲೀಸರಿಗೆ ವಿವರಿಸಿದ್ದಾನೆ.

ಕಟ್ಟಡ ಮಾಲೀಕನ ವಿರುದ್ಧ ಎಫ್‌ಐಆರ್: ‘ಕಟ್ಟಡ ವಾಲಿ ಕುಸಿಯುವ ಹಂತ ತಲುಪಿದ್ದು ಗೊತ್ತಿದ್ದರೂ ಮೌನವಾಗಿದ್ದುಕೊಂಡು ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಮಾಲೀಕ ಸುರೇಶ್ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

'ಹಳೆಯ ಕಟ್ಟಡದಲ್ಲಿ ಹಲವು ತಿಂಗಳ ಹಿಂದೆಯೇ ಬಿರುಕು ಬಿಟ್ಟಿತ್ತು. ಆದರೆ, ಮಾಲೀಕ ನಿರ್ಲಕ್ಷ್ಯ ವಹಿಸಿದ್ದ. ಕಟ್ಟಡ ತೆರವಿಗೆ ಪ್ರಯತ್ನಿಸಿರಲಿಲ್ಲ. ಬೇರೆ ಕಡೆ ವಾಸವಿದ್ದ ಸುರೇಶ್, ಹಳೆಯ ಕಟ್ಟಡದಲ್ಲಿರುವ‌ ಕೊಠಡಿಗಳನ್ನು ಬಾಡಿಗೆ ಕೊಟ್ಟಿದ್ದ. ಪ್ರತಿ ತಿಂಗಳು ಬಾಡಿಗೆ ವಸೂಲಿ‌ ಮಾಡಲು ಕಟ್ಟಡಕ್ಕೆ‌ ಬಂದು ಹೋಗುತ್ತಿದ್ದ. ಬಿರುಕಿನ ಬಗ್ಗೆ ಬಾಡಿಗೆದಾರರು ಹಲವು ಬಾರಿ ಪ್ರಸ್ತಾಪಿಸಿದ್ದರು. ಏನು ಆಗುವುದಿಲ್ಲವೆಂದು ಆತ ವಾದಿಸುತ್ತಿದ್ದ' ಎಂದು ಪೊಲೀಸ್ ಮೂಲಗಳು ಹೇಳಿವೆ‌.

'ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡದಲ್ಲಿ ವಾಸವಿದ್ದ ಕಾರ್ಮಿಕರ ಹೇಳಿಕೆ ಪಡೆಯಲಾಗಿದೆ. ಬಿಬಿಎಂಪಿ ಅಧಿಕಾರಿಗಳೂ ದೂರು ನೀಡಿದ್ದಾರೆ. ಅದರನ್ವಯ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ’ ಎಂದೂ ಮೂಲಗಳು ತಿಳಿಸಿವೆ.

‘ತನಿಖೆಗೆ ತಂಡ ರಚನೆ’

‘ಕಟ್ಟಡ ಕುಸಿಯುವ ಬಗ್ಗೆ ಮಾಲೀಕ ಸುರೇಶ್‌ಗೆ ಮೊದಲೇ ಗೊತ್ತಿತ್ತು. ಆದರೆ, ಆತ ಮೌನವಾಗಿದ್ದ. ಕಟ್ಟಡ ಕುಸಿಯುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.