ಕಾರ್ಯಕ್ರಮದಲ್ಲಿ ಡಿ.ವಿ. ಪರಮಶಿವಮೂರ್ತಿ, ಪುರುಷೋತ್ತಮ ಬಿಳಿಮಲೆ, ಆರ್. ಶೇಷಶಾಸ್ತ್ರಿ, ದೇವರಕೊಂಡಾರೆಡ್ಡಿ, ಶ್ರೀನಿವಾಸ ವಿ. ಪಾಡಿಗಾರ್ ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಬಾ.ರಾ. ಗೋಪಾಲ್ ಅಂತಹವರು ವೈಜ್ಞಾನಿಕ ಹಾಗೂ ಶೈಕ್ಷಣಿಕವಾಗಿ ಭದ್ರವಾದ ನೆಲೆಗಟ್ಟನ್ನು ರೂಪಿಸಿದ್ದರು. ಈ ಕ್ಷೇತ್ರಕ್ಕೆ ಅವರು ಹಾಕಿಕೊಟ್ಟ ಬುನಾದಿ ಬಹುಭಾಷಾ ತಜ್ಞರ ಕೊರತೆಯಿಂದ ಈಗ ಕುಸಿಯುತ್ತಿದೆ’ ಎಂದು ಕನ್ನಡ ಅಭಿವೃದ್ಧಿ ಪ‍್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
ಎಚ್.ಎಸ್. ಗೋಪಾಲ ರಾವ್ ಅವರು ಸಂಪಾದಿಸಿರುವ, ರೂವಾರಿ ಅಭಿನವ ಇಂಪ್ರಿಂಟ್ ಪ್ರಕಟಿಸಿರುವ ಇತಿಹಾಸಕಾರ ಬಾ.ರಾ. ಗೋಪಾಲ್ ಅವರ ಆಂಗ್ಲ ಲೇಖನಗಳ ಸಂಗ್ರಹ ‘ಬಾ.ರಾ. ಗೋಪಾಲ–ಲೇಖ’ ಪುಸ್ತಕವನ್ನು ದಿ ಮಿಥಿಕ್ ಸೊಸೈಟಿಯಲ್ಲಿ ಭಾನುವಾರ ಜನಾರ್ಪಣೆ ಮಾಡಿ, ಮಾತನಾಡಿದರು.
‘ಡಿ.ಎಲ್. ನರಸಿಂಹಾಚಾರ್, ಮಂಜೇಶ್ವರ ಗೋವಿಂದ ಪೈ, ಪಿ.ಬಿ.ದೇಸಾಯಿ, ಶ್ರೀಕಂಠ ಶಾಸ್ತ್ರಿ ಮೊದಲಾದವರು ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಬಹುಭಾಷಾ ತಜ್ಞತೆ ಸಂಶೋಧನೆಗೆ ಸಹಕಾರಿಯಾಯಿತು. ಬಾ.ರಾ. ಗೋಪಾಲ್ ಅವರು ಆರೇಳು ಭಾಷೆ ಬಲ್ಲವರಾಗಿದ್ದರು. ಗೋವಿಂದ ಪೈ ಅವರು ಹದಿನಾಲ್ಕು ಭಾಷೆಗಳನ್ನು ಮಾತನಾಡುತ್ತಿದ್ದರು. ಕರ್ನಾಟಕದಲ್ಲಿ ಈಗ 230 ಭಾಷೆಗಳಿವೆ. ಹಾಗಾಗಿ, ಕರ್ನಾಟಕ ಕಟ್ಟಿದ ಸಂಶೋಧನಾ ಪರಂಪರೆ ಅರ್ಥ ಮಾಡಿಕೊಳ್ಳಲು ಬಹುಭಾಷಾ ತಜ್ಞತೆ ಮುಖ್ಯ’ ಎಂದು ಹೇಳಿದರು.
ಕೃತಿಯ ಬಗ್ಗೆ ಮಾತನಾಡಿದ ಇತಿಹಾಸಕಾರ ಶ್ರೀನಿವಾಸ ವಿ. ಪಾಡಿಗಾರ್, ‘ಚದುರಿ ಹೋಗಿದ್ದ ಬಾ.ರಾ. ಗೋಪಾಲ್ ಅವರ ಲೇಖನಗಳನ್ನು ಸಂಗ್ರಹಿಸಿ, ಪ್ರಕಟಿಸಲಾಗಿದೆ. 59 ಲೇಖನಗಳನ್ನು ಕೃತಿ ಒಳಗೊಂಡಿದ್ದು, ವಿದ್ವತ್ ಪರಿಚಯಿಸುವ ಜತೆಗೆ ವಿದ್ಯಾರ್ಥಿಗಳಿಗೆ ಆಕರವಾಗಲಿದೆ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್. ಶೇಷಶಾಸ್ತ್ರಿ ಅವರು, ಬಾ.ರಾ. ಗೋಪಾಲ್ ಅವರ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ದೇವರಕೊಂಡಾರೆಡ್ಡಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ. ಪರಮಶಿವಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.