ADVERTISEMENT

ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಓಡಿಸಿ: ಮೋದಿ, ನಿರ್ಮಲಾಗೆ ಎಂ.ಬಿ ಪಾಟೀಲ ಪತ್ರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 14:39 IST
Last Updated 5 ಫೆಬ್ರುವರಿ 2026, 14:39 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೆಂಗಳೂರು: ಬೆಂಗಳೂರು–ಮುಂಬೈ ಮಧ್ಯೆ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಘೋಷಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಆಗ್ರಹಿಸಿದ್ದಾರೆ.

ಈ ಕುರಿತು, ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪಾಟೀಲರು ಪತ್ರ ಬರೆದಿದ್ದಾರೆ.

ಈ ಯೋಜನೆ ಜಾರಿಯಾದರೆ ದೇಶದ ತಂತ್ರಜ್ಞಾನ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ‌ ಮುಂಬೈಗೆ ಅಷ್ಟೇ ಅಲ್ಲದೆ ಕರ್ನಾಟಕ, ಮಹಾರಾಷ್ಟ್ರಕ್ಕೆ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಕೇಂದ್ರ ಬಜೆಟ್‌ನಲ್ಲಿ ಈಗಾಗಲೇ ಘೋಷಿಸಿರುವ ಮುಂಬೈ-ಪುಣೆ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಬೆಂಗಳೂರುವರೆಗೂ ವಿಸ್ತರಿಸಬಹುದು. ಬೆಂಗಳೂರು-ಪುಣೆ ನಡುವೆ ಹೈಸ್ಪೀಡ್ ರೈಲು ಓಡಿಸುವುದರಿಂದ ಮಧ್ಯ ಮತ್ತು ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ ಮತ್ತಿತರ ಜಿಲ್ಲೆಗಳಿಗೆ ಲಾಭವಾಗಲಿದೆ. ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ತುಮಕೂರು ಜಿಲ್ಲೆಗಳಲ್ಲಿ ಆರ್ಥಿಕ ಮತ್ತು ಔದ್ಯಮಿಕ ಚಿತ್ರಣವನ್ನು ಬದಲಿಸಲಿದೆ ಎಂದಿದ್ದಾರೆ.

ಬಜೆಟ್‌ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗಳನ್ನು ಘೋಷಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ, ಈ ಎರಡೂ ಮಾರ್ಗಗಳಲ್ಲಿ ರೈಲುಗಳು ಕರ್ನಾಟಕದೊಳಗೆ 100 ಕಿ.ಮೀ. ಮಾತ್ರ ಓಡುತ್ತವೆ. ಇದರಿಂದ ರಾಜ್ಯಕ್ಕೆ ಇರುವ ಪ್ರಯೋಜನ ಸೀಮಿತವಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು-ಮುಂಬೈ ನಡುವೆ ಹೈಸ್ಪೀಡ್ ರೈಲು ಯೋಜನೆ ಕುರಿತು ವಿಸ್ತೃತ ಕಾರ್ಯಸಾಧ್ಯತಾ ಅಧ್ಯಯನ ನಡೆಸಬೇಕು ಎಂದು ಪಾಟೀಲ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಜೋಶಿ ಎಚ್‌ಡಿಕೆ ಸ್ಪಂದನೆ ಸ್ವಾಗತಾರ್ಹ

'ಕೇಂದ್ರ ಬಜೆಟ್ ಮಂಡನೆಯಾದ ಕೂಡಲೇ ಬೆಂಗಳೂರು- ಪುಣೆ- ಮುಂಬೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಗತ್ಯವಿದೆ ಎಂದು ನಾನು ಹೇಳಿದ್ದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಎಚ್. ಡಿ. ಕುಮಾರಸ್ವಾಮಿ ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಚರ್ಚಿಸಿರುವುದು ಸ್ವಾಗತಾರ್ಹ. ಇದು ಕೇವಲ ಭೇಟಿಗೆ ಸೀಮಿತಗೊಳ್ಳದೇ ತಾರ್ಕಿಕ ಅಂತ್ಯ ಕಾಣುವಂತೆ ಮಾಡಬೇಕು’ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.