ADVERTISEMENT

ಅಸಹಜ ಸಾವಲ್ಲ, ಚೂರಿಯಿಂದ ಇರಿದು ಕೊಲೆ

ಸ್ಮಶಾನದಿಂದ ಮೃತದೇಹ ತಂದು ಪರೀಕ್ಷೆ ಮಾಡಿಸಿದ್ದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 25 ಮೇ 2020, 20:39 IST
Last Updated 25 ಮೇ 2020, 20:39 IST
   

ಬೆಂಗಳೂರು: ಬಂಡೇಪಾಳ್ಯ ಠಾಣೆಯ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಮುನಿರಾಜು (50) ಎಂಬುವರ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಚೂರಿಯಿಂದ ಇರಿದು ಅವರನ್ನು ಕೊಲೆ ಮಾಡಿರುವ ಸಂಗತಿ ಬಹಿರಂಗವಾಗಿದೆ.

ಮಂಗಮ್ಮನಪಾಳ್ಯ ಕೆರೆ ಬಳಿ ಮೇ 20ರಂದು ಮನಿರಾಜು ಮೃತದೇಹ ಸಿಕ್ಕಿತ್ತು. ಅಸಹಜ ಸಾವೆಂದು ತಿಳಿದ ಸಂಬಂಧಿಕರು, ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು. ಅಂತಿಮ ವಿಧಿವಿಧಾನ ಮುಗಿಸಿ ಅಂತ್ಯಸಂಸ್ಕಾರ ಮಾಡಲು ಸ್ಮಶಾನಕ್ಕೂ ತೆರಳಿದ್ದರು.

ಬಾತ್ಮೀದಾರರೊಬ್ಬರು ನೀಡಿದ್ದ ಮಾಹಿತಿಯಂತೆ ಸ್ಮಶಾನಕ್ಕೆ ಹೋಗಿದ್ದ ಪೊಲೀಸರು, ಮೃತದೇಹವನ್ನು ಪರೀಕ್ಷಿಸಿದಾಗ ದೇಹದ ಹಲವೆಡೆ ಗಾಯದ ಗುರುತುಗಳಿದ್ದವು. ಪೊಲೀಸರು ಕೊಲೆ ಅನುಮಾನ ವ್ಯಕ್ತಪಡಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದರು.

ADVERTISEMENT

‘ಮುನಿರಾಜು ಅವರನ್ನು ಮೇ 19ರಂದು ದುಷ್ಕರ್ಮಿಗಳು ಕೊಲೆ ಮಾಡಿ ಕೆರೆ ಬಳಿ ಮೃತದೇಹ ಎಸೆದು ಹೋಗಿದ್ದಾರೆ. ಮರುದಿನವೇ ಸಂಬಂಧಿಕರು ಮೃತದೇಹವನ್ನು ಮನೆಗೆ ತಂದು ರಕ್ತದ ಕಲೆಗಳಿದ್ದ ಬಟ್ಟೆ ಬದಲಾಯಿಸಿ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದರು’ ಎಂದು ಪೊಲೀಸರು ಹೇಳಿದರು.

ಕೂಲಿ ಕೆಲಸ: ‘ಮುನಿರಾಜು ಮತ್ತು ಅವರ ಪತ್ನಿ, ಮಂಗಮ್ಮನಪಾಳ್ಯದ ದೊಡ್ಡಮ್ಮ ದೇವಸ್ಥಾನದ ಸಮೀಪ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ದಂಪತಿಗೆ ಒಬ್ಬ ಮಗನಿದ್ದಾನೆ. ಮದ್ಯವ್ಯಸನಿಯಾಗಿದ್ದ ಮುನಿರಾಜು, ಇತ್ತೀಚೆಗೆ ಕೆಲಸಕ್ಕೆ ಹೋಗುತ್ತಿರಲಿಲ್ಲ’ ಎಂದು ಪೊಲಿಸರು ಹೇಳಿದರು.

‘ಕುಡಿದ ಅಮಲಿನಲ್ಲಿ ಕೆರೆ ಅಂಗಳದಲ್ಲಿ ಬಿದ್ದು ಮುನಿರಾಜು ಮೃತಪಟ್ಟಿರಬಹುದೆಂದು ತಿಳಿದು ಅಂತ್ಯಸಂಸ್ಕಾರ ಮಾಡಲು ತಯಾರಿ ಮಾಡಿದ್ದಾಗಿ ಸಂಬಂಧಿಕರು ಹೇಳುತ್ತಿದ್ದಾರೆ. ತನಿಖೆಯಿಂದಲೇ ಕೊಲೆಗೆ ಕಾರಣವೇನು ಹಾಗೂ ಆರೋಪಿಗಳ ಬಗ್ಗೆ ನಿಖರ ಮಾಹಿತಿ ತಿಳಿಯಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.