ADVERTISEMENT

ಅಂಗವಿಕಲ ಮಗನ ಕೊಲೆಗೆ ಸುಪಾರಿ ಕೊಟ್ಟಿದ್ದ ತಂದೆ! ₹50 ಸಾವಿರದ ಆಸೆಗೆ ಹತ್ಯೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:47 IST
Last Updated 18 ಜುಲೈ 2019, 19:47 IST
ಮಹೇಶ ಹಾಗೂ ಜಯಪ್ಪ
ಮಹೇಶ ಹಾಗೂ ಜಯಪ್ಪ   

ಬೆಂಗಳೂರು: ಅಂಗವೈಕಲ್ಯದಿಂದ ಬಳಲುತ್ತಿದ್ದ ಐದು ವರ್ಷದ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಬಾಲಕನ ತಂದೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ನಿವಾಸಿಯಾದ ಬಾಲಕನ ತಂದೆ, ಗಾರೆ ಕೆಲಸ ಮಾಡುವ ಜಯಪ್ಪ (36) ಮತ್ತು ರಾಜಾಜಿನಗರದ ಭಾಷ್ಯಂ ವೃತ್ತದ ಬಳಿಯ ನಿವಾಸಿ, ಮಾಗಡಿ ಪೊಲೀಸ್‌ ಠಾಣೆ ರೌಡಿ ಶೀಟರ್‌ ಮಹೇಶ (37) ಬಂಧಿತರು. ಈತ ಆಟೋ ಚಾಲಕ ಎಂದು ಪೊಲೀಸರು ತಿಳಿಸಿದ್ದಾರೆ.

ಜಯಪ್ಪ, ಅನಾರೋಗ್ಯಪೀಡಿತ ಪುತ್ರ ಬಸವರಾಜುವಿನ ಚಿಕಿತ್ಸೆಗೆ ಹಣ ಇಲ್ಲ ಎಂಬ ಕಾರಣಕ್ಕೆ ಮಹೇಶನ ಜತೆಗೂಡಿ ಈ ಕೃತ್ಯ ಎಸಗಿದ್ದಾನೆ. ಮಗನ ಕೊಲೆಗೆ ತಂದೆ ಸುಪಾರಿ ನೀಡಿದ್ದ ಎಂಬ ಸಂಗತಿ ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

ADVERTISEMENT

ಒಂದೂವರೆ ತಿಂಗಳ ಹಿಂದೆ ಜಯಪ್ಪನಿಗೆ ಮಹೇಶನ ಪರಿಚಯವಾಗಿತ್ತು. ಬಳಿಕ ಇಬ್ಬರೂ ಸ್ನೇಹಿತರಾಗಿದ್ದರು. ‘ನನ್ನ ನಾಲ್ವರು ಮಕ್ಕಳ ಪೈಕಿ ಮೂರನೇಯವನಾದ ಮಹೇಶನಿಗೆ ಮಾತನಾಡಲು ಮತ್ತು ನಡೆದಾಡಲು ಬರುವುದಿಲ್ಲ. ನಿಮ್ಹಾನ್ಸ್‌ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಅಲ್ಲದೆ, ಚಿಕಿತ್ಸೆಗೆ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ಇನ್ನಷ್ಟು ಖರ್ಚು ಮಾಡಲು ನನ್ನಿಂದ ಸಾಧ್ಯವಿಲ್ಲ’ ಎಂದು ಮಹೇಶನ ಬಳಿ ಜಯಪ್ಪ ಹೇಳಿಕೊಂಡಿದ್ದ.

ಅದಕ್ಕೆ ಮಹೇಶ, ‘ಇಂಜೆಕ್ಷನ್‌ ಕೊಟ್ಟು ಮಗುವನ್ನು ಸಾಯಿಸುವುದಾಗಿ ಹೇಳಿದ್ದ. ಈ ಕೆಲಸಕ್ಕೆ ₹ 50 ಸಾವಿರ ಕೊಡಬೇಕು’ ಎಂದು ಕೇಳಿದ್ದ. ಕೆಲಸ ಮುಗಿಸಿದ ಬಳಿಕ ಹಣ ಕೊಡುವುದಾಗಿ ಜಯಪ್ಪ ಹೇಳಿದ್ದ. ಅದಕ್ಕೆ ಒಪ್ಪಿದ್ದ ಮಹೇಶ, ಜಯಪ್ಪನ ಮನೆಯಲ್ಲೇ ಬಸವರಾಜನನ್ನು ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಜಯಪ್ಪ ಗೊರಗುಂಟೆಪಾಳ್ಯದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ನಗರದ ರೌಡಿಗಳು ಹಾಗೂ ಹಳೆ ಆರೋಪಿಗಳ ಚಲನವಲನಗಳ ಮೇಲೆ ನಿಗಾ ವಹಿಸುವಂತೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ನೀಡಿದ ಸೂಚನೆಯಂತೆ ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸ್ ಇನ್ಸ್‍ಪೆಕ್ಟರ್ ಲಕ್ಷ್ಮಿಕಾಂತಯ್ಯ ಮತ್ತು ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ರೌಡಿ ಪಟ್ಟಿಯಲ್ಲಿರುವ ಮಹೇಶ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಕೃತ್ಯ ಬಯಲಾಗಿದೆ. ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.