ಬೆಂಗಳೂರು: ಹಳೆ ವೈಷಮ್ಯದ ಕಾರಣ ವ್ಯಕ್ತಿಯೊಬ್ಬರ ಮೇಲೆ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಪರಾರಿಯಾಗಿದ್ದ ಮೂವರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಲ್ಲಾಪುರ ನಿವಾಸಿ ಆಂಜಿನಪ್ಪ (33) ಅವರನ್ನು ಕೊಲೆ ಮಾಡಿದ ಆರೋಪದಡಿ ಮರಿಯಣ್ಣ ಪಾಳ್ಯದ ಪ್ರೇಮ್, ಆರ್.ಟಿ.ನಗರದ ದರ್ಶನ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಲಾಗಿದೆ.
ಪತ್ನಿಯಿಂದ ದೂರವಾಗಿದ್ದ ಆಂಜಿನಪ್ಪ ನಗರದಲ್ಲಿ ಉಚಿತವಾಗಿ ಊಟ, ಉಪಾಹಾರ ಸಿಗುವ ಕಡೆಗಳಲ್ಲಿ ಹೋಗಿ ಆಹಾರ ಸೇವಿಸಿ ಜೀವನ ಸಾಗಿಸುತ್ತಿದ್ದರು. ಕೆಲ ದಿನಗಳ ಹಿಂದೆ ಆರೋಪಿ ಪ್ರೇಮ್ ಕುರಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಕಲ್ಲುಗಳಿಂದ ಆಂಜಿನಪ್ಪ ಹಲ್ಲೆ ನಡೆಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು.
ಜೂನ್ 23ರಂದು ಆರೋಪಿಗಳು ಮದ್ಯಪಾನಕ್ಕೆ ತೆರಳುವಾಗ ಥಣಿಸಂದ್ರದ ಆಕಾಶವಾಣಿ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ಆಂಜಿನಪ್ಪ ಎದುರಾದರು. ಈ ಹಿಂದೆ ನಡೆದ ಜಗಳದಿಂದ ಕೋಪಗೊಂಡಿದ್ದ ಪ್ರೇಮ್, ತನ್ನ ಸಹಚರರ ಜೊತೆ ಸೇರಿ ದೊಣ್ಣೆಯಿಂದ ಹಲ್ಲೆ ಮಾಡಿದ್ದ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದ ಕಾರಣ ಆಂಜಿನಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಗಮನಿಸಿದ್ದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕುಸಿದು ಬಿದ್ದು ಸಾವನ್ನಪ್ಪಿರಬಹುದು ಎಂದು ಆರಂಭದಲ್ಲಿ ಪೊಲೀಸರು ಶಂಕಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹಲ್ಲೆಯಿಂದಾಗಿ ಸಾವು ಸಂಭವಿಸಿದೆ ಎಂದು ತಿಳಿದು ಬಂದಿತ್ತು.
ಕೊಲೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು, ಕೃತ್ಯ ನಡೆದ ಸ್ಥಳದ ಅಕ್ಕಪಕ್ಕದ ರಸ್ತೆಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದರು. ನಂತರ ಸ್ಥಳೀಯರಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.