ಬೆಂಗಳೂರು: ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಕ್ಕೂರಿನ ಖಾಲಿ ಪ್ರದೇಶದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಮೋಹನ್‌ಕುಮಾರ್ (45) ಎಂದು ಗುರುತಿಸಲಾಗಿದೆ. ‘ಇದು ಆತ್ಮಹತ್ಯೆಯೋ ಕೊಲೆಯೋ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
‘ಮನೆಯಲ್ಲಿ ಚಿನ್ನಾಭರಣ ಕದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ವಿ.ವಿ ಪುರ ಠಾಣೆಯ ಪೊಲೀಸರು ಕೆಲವು ಸುಳಿವು ಆಧರಿಸಿ ಮೋಹನ್ ಕುಮಾರ್ ಅವರ ಸಂಬಂಧಿಯೊಬ್ಬರನ್ನು ಬಂಧಿಸಿದ್ದರು. ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಆಗ ಮೋಹನ್ ಕುಮಾರ್ ಮನೆಯಲ್ಲಿ ಚಿನ್ನಾಭರಣ ಬಚ್ಚಿಟ್ಟಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದ. ಆ ಹೇಳಿಕೆ ಆಧರಿಸಿ ಮೋಹನ್ ಕುಮಾರ್ ಅವರ ಮನೆಯಿಂದ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಈ ಮಧ್ಯೆ ಚಿನ್ನವನ್ನು ಕಳೆದುಕೊಂಡಿದ್ದ ವ್ಯಕ್ತಿ, ಮೋಹನ್ ಕುಮಾರ್ ಅವರ ಜತೆಗೆ ಗಲಾಟೆ ನಡೆಸಿದ್ದರು. ಕದ್ದ ಚಿನ್ನವನ್ನು ಮನೆಯಲ್ಲಿ ಯಾವ ಕಾರಣಕ್ಕೆ ಇರಿಸಿಕೊಂಡಿದ್ದೆ ಎಂದು ಪ್ರಶ್ನಿಸಿದ್ದರು. ಇದರಿಂದ ಮನನೊಂದು ಮೋಹನ್ ಕುಮಾರ್ ಆತ್ಮಹತ್ಯೆಗೆ ಶರಣಾಗಿರಬಹುದು’ ಎಂದು ಪೊಲೀಸರು ಶಂಕಿಸಿದ್ದಾರೆ.
‘ಜಕ್ಕೂರಿನ ಎರಡು ಪಥದ ರಸ್ತೆಯ ಸಮೀಪ ಖಾಲಿ ಪ್ರದೇಶದಲ್ಲಿ ಮೃತದೇಹ ಇತ್ತು. ಮೃತದೇಹವನ್ನು ಗಮನಿಸಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದಾಖಲೆ ಪರಿಶೀಲನೆ ವೇಳೆ ಮೋಹನ್ ಕುಮಾರ್ ಎಂಬುದು ಗೊತ್ತಾಯಿತು. ಅವರು ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಇತ್ತೀಚಿಗೆ ಚಿನ್ನದ ವಿಚಾರಕ್ಕಾಗಿ ಖಾಸಗಿ ವ್ಯಕ್ತಿಯೊಬ್ಬರಿಂದ ಬೆದರಿಕೆ ಇದ್ದುದರಿಂದ ನೊಂದಿದ್ದರು ಎಂಬುದಾಗಿ ಮೃತನ ಪತ್ನಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.
ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.