ADVERTISEMENT

ನಿದ್ದೆ ಮಾಡುತ್ತಿದ್ದ ತಾಯಿಯನ್ನೆ ಕೊಂದ ಮಗಳು, ಸಹೋದರನ ಹತ್ಯೆಗೂ ಯತ್ನ

ಅಕ್ಷಯನಗರದಲ್ಲಿ ನಡೆದಿರುವ ಕೃತ್ಯ * ಟೆಕಿಯಿಂದ ಸಹೋದರನ ಹತ್ಯೆಗೂ ಯತ್ನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 2:37 IST
Last Updated 4 ಫೆಬ್ರುವರಿ 2020, 2:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ನಿದ್ದೆ ಮಾಡುತ್ತಿದ್ದ ತಾಯಿಯನ್ನು ಕೊಂದ ಮಹಿಳಾ ಟೆಕಿಯೊಬ್ಬರು, ಬಳಿಕ ಸಹೋದರನ ಹತ್ಯೆಗೂ ಯತ್ನಿಸಿದ ಘಟನೆ ಕೆ.ಆರ್.ಪುರದ ಅಕ್ಷಯನಗರದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ನಿರ್ಮಲಾ (54) ಕೊಲೆಯಾದವರು. ಘಟನೆಯಲ್ಲಿ ಟೆಕಿ ಮಹಿಳೆಯ ಸಹೋದರ ಹರೀಶ್ ಚಂದ್ರಶೇಖರ್ (31) ಅವರಿಗೆ ಗಾಯವಾಗಿದೆ. ಆರೋಪಿ ಅಮೃತಾ (33) ತಲೆಮರೆಸಿಕೊಂಡಿದ್ದು, ಆಕೆಯ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ದಾವಣಗೆರೆ ಜಿಲ್ಲೆಯವರಾದ ನಿರ್ಮಲಾ ಅವರು ಮಗ ಹರೀಶ್ ಮತ್ತು ಮಗಳು ಅಮೃತಾ ಜತೆ ಅಕ್ಷಯನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಾರತ್ತಹಳ್ಳಿಯಲ್ಲಿರುವ ಸಿಂಫೋನಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅಮೃತಾಗೆ ಇತ್ತೀಚೆಗೆ ಹೈದರಾಬಾದಿನಲ್ಲಿರುವ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗ ಸಿಕ್ಕಿತ್ತು.

ADVERTISEMENT

ಫೆ. 2ರಂದು ತಾಯಿ ಮತ್ತು ಸಹೋದರನನ್ನು ಹೈದರಬಾದ್‌ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಅಮೃತಾ ನಿರ್ಧರಿಸಿದ್ದಳು. ಇಡೀ ಕುಟುಂಬ ಅಂದು ನಸುಕಿನಲ್ಲಿ ವಿಮಾನದಲ್ಲಿ ಹೈದರಾಬಾದ್‌ಗೆ ತೆರಳಬೇಕಿತ್ತು. ಹಿಂದಿನ ರಾತ್ರಿ ಎಲ್ಲರೂ ಒಟ್ಟಿಗೆ ಊಟ ಮಾಡಿ ಮಲಗಿದ್ದರು. ಕೊಠಡಿಯಲ್ಲಿ ಹರೀಶ್ ಮಲಗಿದ್ದರೆ, ನಿರ್ಮಲಾ ಮತ್ತು ಅಮೃತಾ ಹಾಲ್‌ನಲ್ಲಿ ಮಲಗಿದ್ದರು.

‘ನಸುಕಿನ ನಾಲ್ಕು ಗಂಟೆಗೆ ನನ್ನ ಕೊಠಡಿಯಲ್ಲಿದ್ದ ಬೀರುವಿನ ಶಬ್ದವಾಗಿದ್ದು ಎಚ್ಚರಗೊಂಡು ನೋಡಿದಾಗ ಬೀರು ತೆಗೆದು ಅಮೃತಾ ಹುಡುಕಾಡುತ್ತಿದ್ದಳು. ‘ಏನು ಹುಡುಕುತ್ತಿದ್ದೀಯಾ’ ಎಂದು ಕೇಳಿದಾಗ, ‘ಬಟ್ಟೆಗಳನ್ನು ಪ್ಯಾಕ್ ಮಾಡುತ್ತಿದ್ದೇನೆ’ ಎಂದು ಹೇಳಿ ಕೊಠಡಿಯಿಂದ ಹೊರಗೆ ಹೋದಳು.

‘10 ನಿಮಿಷದ ಬಳಿಕ ಮತ್ತೆ ಆಕೆ ಕೊಠಡಿಗೆ ಬಂದಿದ್ದನ್ನು ನೋಡಿ ನಾನು ಎದ್ದು ಕುಳಿತುಕೊಂಡಾಗ ನನ್ನ ಹತ್ತಿರ ಬಂದು ಕೈಯಲ್ಲಿದ್ದ ಚಾಕುವಿನಿಂದ ನನ್ನನ್ನು ಸಾಯಿಸುವ ಉದ್ದೇಶದಿಂದ ಕತ್ತಿನ ಬಲಭಾಗಕ್ಕೆ ಚುಚ್ಚಿದಳು. ನಾನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಾಗ ಮತ್ತೊಮ್ಮೆ ಇರಿಯಲು ಮುಂದಾದಳು. ಎಡಗೈಯನ್ನು ಅಡ್ಡ ಹಿಡಿದಾಗ ಅಂಗೈಗೆ ಗಾಯವಾಯಿತು. ನಾನು ಗಾಬರಿಯಿಂದ, ಅಮ್ಮನ ಬಗ್ಗೆ ವಿಚಾರಿಸಿದಾಗ ಇದೇ ಚಾಕುವಿನಿಂದ ಅಮ್ಮನಿಗೆ ಚುಚ್ಚಿ, ಹಾರೆಯಿಂದ ಹೊಡೆದು ಸಾಯಿಸಿದ್ದೇನೆ ಎಂದು ಹೇಳಿದಳು’

‘ಏಕೆ ಈ ರೀತಿ ಮಾಡಿದ್ದೀಯಾ’ ಎಂದು ನಾನು ಅವಳನ್ನು ಕೇಳಿದ್ದಕ್ಕೆ ‘ನಾನು ಸುಮಾರು ₹ 15 ಲಕ್ಷದಷ್ಟು ಸಾಲ ಮಾಡಿದ್ದೇನೆ. ಸಾಲಗಾರರು ಭಾನುವಾರ ಮನೆಯ ಬಳಿ ಬರುತ್ತೇನೆಂದು ಹೇಳಿದ್ದಾರೆ. ಸಾಲಗಾರರು ಬಂದರೆ ಮರ್ಯಾದೆ ಹೋಗಬಾರದು. ಅದಕ್ಕೆ ನಿಮ್ಮಿಬ್ಬರನ್ನು ಕೊಲೆ ಮಾಡಿ ಹೋಗುತ್ತೇನೆ’ ಎಂದಳು. ನನ್ನ ಕುತ್ತಿಗೆಯ ಭಾಗದಲ್ಲಿ ರಕ್ತ ಬರುತ್ತಿದ್ದರಿಂದ ನಾನು ನಿಶಕ್ತಗೊಂಡೆ. ಆಕೆಯನ್ನು ಹಿಡಿಯಲು ಹೋದಾಗ ನನ್ನನ್ನು ತಳ್ಳಿ ಹೊರಗೆ ಓಡಿ ಹೋದಳು. ತಕ್ಷಣ ಚಿಕ್ಕಮ್ಮನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ವಿಷಯ ತಿಳಿಸಿದೆ’ ಎಂದು ಹರೀಶ್ ದೂರಿನಲ್ಲಿ ತಿಳಿಸಿದ್ದಾರೆ.

‘ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಆರೋಪಿ ಅಮೃತಾ ತಲೆಮರೆಸಿಕೊಂಡಿದ್ದಾಳೆ. ಆಕೆ ಸಾಲ ಮಾಡಿದ್ದರೆ, ತಾಯಿಯನ್ನು ಹತ್ಯೆ ಮಾಡುವ ಅಗತ್ಯ ಏನಿತ್ತು ಎಂಬುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ವಿವರಿಸಿದರು.

ಕೆ.ಆರ್. ಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.