ADVERTISEMENT

ಮದ್ಯಪಾನ ಮಾಡಲು ₹ 100 ನೀಡದಿದ್ದಕ್ಕೆ ಕೊಲೆ: ಆರೋಪಿ ಬಂಧನ

ಮರಣೋತ್ತರ ಪರೀಕ್ಷೆ ವರದಿ ಸುಳಿವು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 21:48 IST
Last Updated 17 ಡಿಸೆಂಬರ್ 2021, 21:48 IST
   

ಬೆಂಗಳೂರು: ಮದ್ಯಪಾನ ಮಾಡಲು ₹100 ಕೊಡಲಿಲ್ಲವೆಂಬ ಕಾರಣಕ್ಕೆ ಎಸ್. ಪ್ರತೀಕ್ ಯಾದವ್ (31) ಎಂಬುವರನ್ನು ಕೊಲೆ ಮಾಡಿದ್ದ ಆರೋಪದಡಿ ಶಂಶೀರ್ ಎಂಬಾತನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಮತ್ತಿಕೆರೆ ನಿವಾಸಿ ಪ್ರತೀಕ್, ಮಾಂಸದಂಗಡಿ ನಡೆಸುತ್ತಿದ್ದರು. ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಚಿಕಿತ್ಸೆಗೆ ಸ್ಪಂದಿಸದೇ ಅವರು ತೀರಿಕೊಂಡಿದ್ದರು. ಅಪಘಾತದಿಂದ ಗಾಯಗೊಂಡಿದ್ದಾಗಿ ಆಸ್ಪತ್ರೆಯಲ್ಲಿ ನಮೂದಿಸಲಾಗಿತ್ತು. ಮರಣೋತ್ತರ ‍ಪರೀಕ್ಷೆ ವರದಿ ಬಂದಾಗ, ಇದೊಂದು ಕೊಲೆ ಎಂಬುದು ಗೊತ್ತಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ವರದಿ ನೀಡಿದ್ದ ಸುಳಿವು ಆಧರಿಸಿ ಪುರಾವೆಗಳನ್ನು ಸಂಗ್ರಹಿಸಿ ಆರೋಪಿ ಶಂಶೀರ್‌ನನ್ನು ಬಂಧಿಸಲಾಗಿದೆ. ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದ್ದು, ತಪ್ಪೊಪ್ಪಿಕೊಂಡಿದ್ದಾನೆ’ ಎಂದೂ ತಿಳಿಸಿದರು.

ADVERTISEMENT

ತೂಕದ ಕಲ್ಲಿನಿಂದ ಹೊಡೆದಿದ್ದ: ‘ಪ್ರತೀಕ್ ಅವರು ಕೊಡಿಗೇಹಳ್ಳಿ ಬಳಿಯ ತಿಂಡ್ಲು ವೃತ್ತದಲ್ಲಿರುವ ಸ್ನೇಹಿತರೊಬ್ಬರ ಮಾಂಸದಂಗಡಿಗೆ ಅಕ್ಟೋಬರ್ 17ರಂದು ಬಂದಿದ್ದರು. ಅಂಗಡಿಯಲ್ಲಿ ಕುಳಿತು ಪರಸ್ಪರ ಮಾತನಾಡುತ್ತಿದ್ದರು. ಅದೇ ಸಂದರ್ಭದಲ್ಲೇ ಆರೋಪಿ ಶಂಶೀರ್ ಅಂಗಡಿಗೆ ಬಂದಿದ್ದ’ ಎಂದು ಪೊಲೀಸರು ಹೇಳಿದರು.

‘ಮದ್ಯ ವ್ಯಸನಿಯಾದ ಆರೋಪಿ ಶಂಶೀರ್, ಮದ್ಯಪಾನಕ್ಕಾಗಿ ₹100 ಕೊಡುವಂತೆ ಪ್ರತೀಕ್‌ ಅವರನ್ನು ಒತ್ತಾಯಿಸಿದ್ದ. ಹಣವಿಲ್ಲವೆಂದು ಅವರು ಹೇಳಿದ್ದರು. ಅಷ್ಟಕ್ಕೆ ಸಿಟ್ಟಾದ ಆರೋಪಿ, ಅಂಗಡಿಯಲ್ಲಿದ್ದ 1 ಕೆ.ಜಿ ತೂಕದ ಕಲ್ಲಿನಿಂದ ಪ್ರತೀಕ್‌ ಅವರ ತಲೆಗೆ ಹೊಡೆದು ಪರಾರಿಯಾಗಿದ್ದ’ ಎಂದೂ ತಿಳಿಸಿದರು.

‘ತೀವ್ರ ಗಾಯಗೊಂಡು ಕುಸಿದು ಬಿದ್ದಿದ್ದ ಪ್ರತೀಕ್‌ ಅವರನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಜೊತೆಗಿದ್ದ ಕೆಲವರು, ಅಪಘಾತದಿಂದ ಗಾಯವಾಗಿರುವುದಾಗಿ ವೈದ್ಯರ ಬಳಿ ಸುಳ್ಳು ಹೇಳಿದ್ದರು’ ಎಂದೂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.