ADVERTISEMENT

ಮಹಿಳೆ ಹತ್ಯೆ; ಬಾಡಿಗೆದಾರನ ಮೇಲೆ ಅನುಮಾನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 15:33 IST
Last Updated 24 ಸೆಪ್ಟೆಂಬರ್ 2020, 15:33 IST
   

ಬೆಂಗಳೂರು: ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ಗಂಗಮ್ಮ (40) ಎಂಬುವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದ್ದು, ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಶಿವಕುಮಾರ್ ಎಂಬಾತ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

‘ನರಸಿಪುರದ ನಿವಾಸಿ ಗಂಗಮ್ಮ, ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಕೊಲೆ ಸಂಬಂಧ ಪುತ್ರಿ ಸುಮಿತ್ರಾ ದೂರು ನೀಡಿದ್ದಾರೆ. ‘ಆರೋಪಿ ಶಿವಕುಮಾರ್ ಮೇಲೆ ಅನುಮಾನವಿದೆ’ ಎಂದು ಪುತ್ರಿ ದೂರಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಸ್ವಂತ ಮನೆಯಲ್ಲಿ ವಾಸವಿದ್ದ ಗಂಗಮ್ಮ, ಮೇಲ್ಮಡಿಯಲ್ಲಿದ್ದ ಮನೆಯನ್ನು ಬೀದಿ ವ್ಯಾಪಾರಿ ಶಿವಕುಮಾರ್ ಎಂಬಾತನಿಗೆ ಬಾಡಿಗೆ ಕೊಟ್ಟಿದ್ದರು. ಆತ, ಗಂಗಮ್ಮ ಅವರ ಮನೆಗೂ ಆಗಾಗ ಬಂದು ಹೋಗುತ್ತಿದ್ದ.’

ADVERTISEMENT

‘ಸೆ. 21ರಂದು ಬೆಳಿಗ್ಗೆ ಗಂಗಮ್ಮ ಮೊಬೈಲ್‌ಗೆ ಪುತ್ರಿ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ್ದ ಶಿವಕುಮಾರ್, ‘ಗಂಗಮ್ಮ ಅವರು ಪರಿಚಯಸ್ಥರನ್ನು ಆಸ್ಪತ್ರೆಗೆ ದಾಖಲಿಸಲು ಹೋಗಿದ್ದಾರೆ’ ಎಂದು ಹೇಳಿದ್ದ. ಸಂಜೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅನುಮಾನಗೊಂಡ ಪುತ್ರಿ, ಪಕ್ಕದ ಮನೆಯವರಿಗೆ ಕರೆ ಮಾಡಿ ವಿಚಾರಿಸಿದ್ದರು. ‘ಶಿವಕುಮಾರ್ ಮನೆ ಕೀ ಕೊಟ್ಟು ಹೋಗಿದ್ದಾನೆ’ ಎಂದು ಪಕ್ಕದ ಮನೆಯವರು ತಿಳಿಸಿದ್ದರು’ ಎಂದೂ ಪೊಲೀಸರು ವಿವರಿಸಿದರು.

‘ಮರುದಿನ ಬೆಳಿಗ್ಗೆ ಮನೆ ಬಳಿ ಬಂದಿದ್ದ ಪುತ್ರಿ, ಬಾಗಿಲು ತೆಗೆದು ನೋಡಿದಾಗ ಮೃತದೇಹ ಕಂಡಿತ್ತು. ಅವರೇ ಠಾಣೆಗೆ ಮಾಹಿತಿ ನೀಡಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.