
ಬೆಂಗಳೂರು: ‘ಅಣಬೆ ಬೇಸಾಯವನ್ನು ಸಮಗ್ರ ಕೃಷಿಯ ಪ್ರಮುಖ ಭಾಗವಾಗಿ ಪರಿಗಣಿಸಬೇಕು’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಹೇಳಿದರು.
ಮಿಲ್ಕಿವೇ ಟೆಕ್ನಾಲಜೀಸ್, ಡಾ.ಕುರಾಡೇಸ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿರುವ ಅಂತರರಾಷ್ಟ್ರೀಯ ಅಣಬೆ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ದೇಶದ ಜನಸಂಖ್ಯೆಗೆ ಅನುಗುಣವಾಗಿ ಅಣಬೆಯನ್ನು ಉತ್ಪಾದಿಸಬೇಕು. ರೈತರು ಹೆಚ್ಚಾಗಿ ಅಣಬೆ ಕೃಷಿ ಮಾಡುವ ಮೂಲಕ ಆಹಾರ ಭದ್ರತೆಯ ಜೊತೆಗೆ ಪೌಷ್ಟಿಕ ಭದ್ರತೆಯನ್ನು ಒದಗಿಸಬೇಕು. ಚೀನಾ ಮತ್ತು ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಣಬೆ ಮಾರುಕಟ್ಟೆ ಇನ್ನೂ ಸೀಮಿತವಾಗಿದೆ. ಅಣಬೆ ಒಂದು ಪೌಷ್ಟಿಕ ಆಹಾರವಾಗಿದ್ದು, ಇದನ್ನು ಜನಪ್ರಿಯಗೊಳಿಸುವ ಮೂಲಕ ಮಾರುಕಟ್ಟೆಯ ಜಾಲವನ್ನು ವಿಸ್ತರಿಸಬೇಕಾಗಿದೆ’ ಎಂದು ತಿಳಿಸಿದರು.
ಡಾ. ಕುರಾಡೇಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಂಗಮ್ ಕುರಾಡೇಸ್ ಮಾತನಾಡಿ, ‘ಅಣಬೆ ಕೃಷಿ ಅತ್ಯಂತ ಭರವಸೆಯ ಕ್ಷೇತ್ರವಾಗಿದೆ. ಇದರಲ್ಲಿ ಪ್ರೋಟಿನ್, ವಿಟಾಮಿನ್ ಮತ್ತು ಖನಿಜಗಳು ಸಮೃದ್ಧವಾಗಿವೆ. ಇದನ್ನು ಕೃಷಿ ತ್ಯಾಜ್ಯದಿಂದಲೂ ಬೆಳೆಯಬಹುದಾಗಿದೆ. ಅಣಬೆ ಕೃಷಿ ಪರಿಸರ ಸ್ನೇಹಿಯಾಗಿದ್ದು, ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆಯಬಹುದು’ ಎಂದರು.
ಗ್ರೋಡೀಸಲ್ ಸಿಇಒ ಅತುಲ್ ಸಕ್ಸೆನಾ, ಮಿಲ್ಕಿವೇ ಟೆಕ್ನಾಲಜೀಸ್‌ನ ಸಿಇಒ ಅನುರಾಗ್ ಸಕ್ಸೆನಾ, ಡೇನಿಯಲ್ ಡಜೆವಿಸ್ಕ್, ವಿಶ್ವವಿದ್ಯಾಲಯದ ಸಂಶೋಧಾನ ನಿರ್ದೇಶಕ ಎಚ್.ಎಸ್. ಶಿವರಾಮು, ಕೃಷಿ ಸೂಕ್ಷ್ಮಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಎನ್. ಉಮಾಶಂಕರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.