ADVERTISEMENT

55ನೇ ಸಂಗೀತ ಸಮ್ಮೇಳನ: ಶಾಲಾ ಪಠ್ಯದಲ್ಲಿ ಸಂಗೀತ ಅಳವಡಿಸಿ; ಪಿಟೀಲು ಸುಬ್ರಮಣ್ಯಂ

ಬೆಂಗಳೂರು ಗಾಯನ ಸಮಾಜ ಹಮ್ಮಿಕೊಂಡಿದ್ದ 55ನೇ ಸಂಗೀತ ಸಮ್ಮೇಳನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 14:04 IST
Last Updated 16 ನವೆಂಬರ್ 2025, 14:04 IST
<div class="paragraphs"><p>ಸಮಾರಂಭದಲ್ಲಿ (ಕುಳಿತವರು ಎಡದಿಂದ) ಅಚ್ಯುತ್ ಎಂ. ಆತ್ರೇಯ, ಪ್ರಜ್ವಲ್ ಭಾರದ್ವಾಜ್, ಪ್ರಜ್ಞಾ ಅಡಿಗ ಮತ್ತು ಶಮಿತ್ ಎಸ್. ಗೌಡ ಅವರಿಗೆ ‘ಯುವ ಕಲಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು</p></div>

ಸಮಾರಂಭದಲ್ಲಿ (ಕುಳಿತವರು ಎಡದಿಂದ) ಅಚ್ಯುತ್ ಎಂ. ಆತ್ರೇಯ, ಪ್ರಜ್ವಲ್ ಭಾರದ್ವಾಜ್, ಪ್ರಜ್ಞಾ ಅಡಿಗ ಮತ್ತು ಶಮಿತ್ ಎಸ್. ಗೌಡ ಅವರಿಗೆ ‘ಯುವ ಕಲಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು

   

ಬೆಂಗಳೂರು: ‘ಮಕ್ಕಳಲ್ಲಿ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಶಾಸ್ತ್ರೀಯ ಸೇರಿ ಸಂಗೀತದ ವಿವಿಧ ಪ್ರಕಾರಗಳನ್ನು ಶಾಲಾ ಪಠ್ಯದಲ್ಲಿ ಅಳವಡಿಸಬೇಕು’ ಎಂದು ಪಿಟೀಲು ವಾದಕ ಎಲ್. ಸುಬ್ರಮಣ್ಯಂ ಆಗ್ರಹಿಸಿದರು.

ಬೆಂಗಳೂರು ಗಾಯನ ಸಮಾಜವು ತನ್ನ ಕೇಂದ್ರದಲ್ಲಿ ಇದೇ 23ರವರೆಗೆ ಹಮ್ಮಿಕೊಂಡಿರುವ 55ನೇ ಸಂಗೀತ ಸಮ್ಮೇಳನಕ್ಕೆ ಭಾನುವಾರ ಚಾಲನೆ ನೀಡಿ, ಮಾತನಾಡಿದರು.

ADVERTISEMENT

‘ವಿದೇಶದಲ್ಲಿ ಇರುವ ತರಹ ಇಲ್ಲಿಯೂ ಶಾಲಾ ಪಠ್ಯದಲ್ಲಿ ಸಂಗೀತವನ್ನು ಕಡ್ಡಾಯಗೊಳಿಸಬೇಕು. ಪಾಶ್ಚಾತ್ಯ ಸಂಗೀತ, ಹಿಂದೂಸ್ತಾನಿ ಸಂಗೀತ ಸೇರಿ ಯಾವುದೇ ಪ್ರಕಾರದಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಬೇಕು. ಸಂಗೀತವು ಮಗುವಿನ ಸಂವೇದನಾ ಅನುಭವವನ್ನು ಉತ್ತೇಜಿಸುತ್ತದೆ. ಶೈಕ್ಷಣಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ನಮ್ಮ ‘ಸಪ ಸಂಸ್ಥೆ’ಯ ಮೂಲಕ ಸುಮಾರು 50 ಸಾವಿರ ವಿದ್ಯಾರ್ಥಿಗಳಿಗೆ ಸಂಗೀತ ತರಗತಿಗಳನ್ನು ನಡೆಸಿ, ಸಂಗೀತ ಪ್ರಜ್ಞೆ ಬೆಳೆಸುತ್ತಿದ್ದೇವೆ. ಗಾಯಕರಿಗೆ ನೀಡಿದಷ್ಟೇ ಪ್ರಾಮುಖ್ಯವು ವಾದ್ಯ ಕಲಾವಿದರಿಗೂ ಸಿಗಬೇಕು’ ಎಂದು ಅಭಿಪ್ರಾಯಪಟ್ಟರು. 

ಸಮ್ಮೇಳನಾಧ್ಯಕ್ಷೆ ಪದ್ಮಾ ಗುರುದತ್, ‘ಕಲಾವಿದರಾಗಲು ಗುರು–ಶಿಷ್ಯ ಇಬ್ಬರ ಪಾತ್ರವೂ ಪ್ರಮುಖವಾಗುತ್ತದೆ. ಜ್ಞಾನದಾಹಿ ಶಿಷ್ಯನಿಗೆ ಜ್ಞಾನಸ್ಥ ಗುರು ದೊರಕುವುದೆಷ್ಟು ಸುಕೃತವೋ, ಜ್ಞಾನಸ್ಥ ಗುರುವಿಗೆ ಜ್ಞಾನದಾಹಿ ಶಿಷ್ಯ ಸಿಗುವುದು ಅಷ್ಟೇ ಸುಕೃತ’ ಎಂದು ಹೇಳಿದರು. 

ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ ಎಂ.ಆರ್.ವಿ. ಪ್ರಸಾದ್, ‘ನಮ್ಮ ಸಂಸ್ಥೆಯು ರಾಜ್ಯದ ಹಿರಿಯ ಕಲಾವಿದರಿಗೆ ವೇದಿಕೆ ಕಲ್ಪಿಸುವ ಜತೆಗೆ, ಉದಯೋನ್ಮುಖ ಕಲಾವಿದರನ್ನು ಪರಿಚಯಿಸುತ್ತಿದೆ. ಮಕ್ಕಳಿಗೆ ಸಂಗೀತ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಈ ವರ್ಷ ಸ್ಪರ್ಧೆಯಲ್ಲಿ 900 ಮಕ್ಕಳು ಭಾಗವಹಿಸಿದ್ದರು, ಅವರನ್ನು ಪ್ರೋತ್ಸಾಹಿಸುವ ಮೂಲಕ ಸಂಗೀತ ವಿದ್ವಾಂಸರನ್ನು ತಯಾರಿಸುತ್ತಿದ್ದೇವೆ’ ಎಂದು ಹೇಳಿದರು.

ಇದಕ್ಕೂ ಮೊದಲು ಕಲಾವಿದರಾದ ಅಚ್ಯುತ್ ಎಂ. ಆತ್ರೇಯ, ಪ್ರಜ್ವಲ್ ಭಾರದ್ವಾಜ್, ಪ್ರಜ್ಞಾ ಅಡಿಗ ಮತ್ತು ಶಮಿತ್ ಎಸ್. ಗೌಡ ಅವರಿಗೆ ‘ಯುವ ಕಲಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ₹20 ಸಾವಿರ ನಗದು ಒಳಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.