ADVERTISEMENT

ಕೆಳಸೇತುವೆ ಕಾಮಗಾರಿ ವಿಳಂಬ

ಮುತ್ತುರಾಜ್ ಜಂಕ್ಷನ್‌: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್‌

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 19:59 IST
Last Updated 25 ಜೂನ್ 2019, 19:59 IST
   

ಬೆಂಗಳೂರು: ಮುತ್ತುರಾಜ್ ಜಂಕ್ಷನ್‌ ನಿರ್ಮಿಸುತ್ತಿರುವ ಕೆಳಸೇತುವೆ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸದಿರುವ ಬಗ್ಗೆ ಮೇಯರ್‌ ಗಂಗಾಂಬಿಕೆ ಅವರು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಸಿಲ್ಕ್ ಬೋಡ್೯ ಜಂಕ್ಷನ್‌ ವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಿಸುವ ಯೋಜನೆಯ ಭಾಗವಾಗಿ ಮುತ್ತುರಾಜ್‌ ಜಂಕ್ಷನ್‌ನಲ್ಲಿ ಕೆಳಸೇತುವೆ ನಿರ್ಮಿಸಲಾಗುತ್ತಿದೆ.

ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದರಿಂದ ಮೇಯರ್‌ ಅವರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

‘ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಈ ಕಾಮಗಾರಿ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದೆ. ಆದರೂ ಏಕೆ ಕೆಲಸ ಪೂರ್ಣಗೊಂಡಿಲ್ಲ’ ಎಂದು ಎಂಜಿನಿಯರ್‌ಗಳನ್ನು ಪ್ರಶ್ನಿಸಿದರು.

‘ಜಂಕ್ಷನ್ ಕಾಮಗಾರಿ ನಡೆಯುವ ಸ್ಥಳದಲ್ಲಿ ಬೆಸ್ಕಾಂನ ವಿದ್ಯುತ್‌ ಕೇಬಲ್‌ಗಳನ್ನು ಹಾಗೂ ಜಲ ಮಂಡಳಿಗೆ ಸೇರಿದ 600 ಮಿ.ಮೀ ಸುತ್ತಳತೆಯ ಕೊಳವೆಯನ್ನು ನೆಲದಡಿ ಜೋಡಿಸಬೇಕಾಯಿತು. ಸ್ಥಳದಲ್ಲಿದ್ದ ಭಾರಿ ಗಾತ್ರದ ಬಂಡೆಗಳನ್ನು ಸ್ಪೋಟಿಸಬೇಕಾಗಿತ್ತು. ಇದಕ್ಕೆ ಆಸುಪಾಸಿನ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅಕ್ಕ ಪಕ್ಕದ ಮನೆಗಳಿಗೆ ತೊಂದರೆ ಆಗದಂತೆ ವೈಜ್ಞಾನಿಕ ರೀತಿಯಲ್ಲಿ ಬಂಡೆ ತೆರವುಗೊಳಿಸಿದೆವು. ಇದರಿಂದಾಗಿ ಕೆಲಸ ವಿಳಂಬವಾಯಿತು’ ಎಂದು ಎಂಜಿನಿಯರ್‌ಗಳು ಸಮಜಾಯಿಷಿ ನೀಡಿದರು.

‘ಶೇ 80ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ. ಜುಲೈ ತಿಂಗಳ ಒಳಗೆ ಈ ಕೆಳಸೇತುವೆಯನ್ನು ವಾಹನ ಸಂಚಾರಕ್ಕೆ ಬಿಟ್ಟುಕೊಡುತ್ತೇವೆ’ ಎಂದರು.

‘ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯಡಿ ಇಟ್ಟುಮಡು ಜಂಕ್ಷನ್, ಫುಡ್ ವಲ್ಡ್೯ ಜಂಕ್ಷನ್, ಕಾಮಾಕ್ಯ ಜಂಕ್ಷನ್‌ಗಳು ಸೇರಿದಂತೆ ಒಟ್ಟು1 ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ₹ 125 ಕೋಟಿ ವೆಚ್ಚವಾಗಲಿದೆ’ ಎಂದು ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ಮಾಹಿತಿ ನೀಡಿದರು.

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ವೈಟ್‌ ಟಾಪಿಂಗ್‌ ನಡೆಸಿರುವ ರಸ್ತೆಗಳ ಇಕ್ಕೆಲಗಳಲ್ಲಿ ನಿರ್ಮಿಸಿದ್ದ ಚರಂಡಿಗಳನ್ನು ಮೇಯರ್‌ ಪರಿಶೀಲಿಸಿದರು.

ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.‘ಚರಂಡಿಗಳನ್ನು ದುರಸ್ತಿಪಡಿಸಿ ನೀರು ಸರಾಗವಾಗಿ ಹರಿಯಲು ಅವಕಾಶ ಕಲ್ಪಿಸಬೇಕು. ಅದರ ಮುಚ್ಚಳಗಳನ್ನು ಅಚ್ಚು ಕಟ್ಟಾಗಿ ನಿರ್ಮಿಸಬೇಕು’ ಎಂದು ಮೇಯರ್‌ ಸೂಚಿಸಿದರು. ಈ ಕಾಮಗಾರಿಗಳ ಉಸ್ತುವಾರಿ ನೋಡಿಕೊಂಡಿದ್ದ ಎಂಜಿನಿಯರ್‌ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಆದೇಶ ಮಾಡಿದರು.

ಗಾಳಿ ಆಂಜನೇಯ ದೇವಸ್ಥಾನದ ಬಳಿ ಅನಧಿಕೃತವಾಗಿ ಸ್ಕೈ ವಾಕ್ ನಿರ್ಮಿಸಲಾಗುತ್ತಿದೆ ಎಂದು ದೂರಿದ ಸ್ಥಳೀಯರು, ಅದನ್ನು ತೆರವು ಗೊಳಿಸುವಂತೆ ಮೇಯರ್‌ಗೆ ಮನವಿ ಮಾಡಿದರು.

₹17.82 ಕೋಟಿ: ಮುತ್ತುರಾಜ್‌ ಜಂಕ್ಷನ್‌ ಕೆಳಸೇತುವೆ ಕಾಮಗಾರಿಯ ಅಂದಾಜು ವೆಚ್ಚ

277 ಮೀ.: ಕೆಳಸೇತುವೆ ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.