ADVERTISEMENT

ಬೆಂಗಳೂರು | ಅಂಧರ ಸಬಲೀಕರಣ: ನಿಧಿಯ ನಿರೀಕ್ಷೆಯಲ್ಲಿ ಎನ್‌ಜಿಒ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 18:59 IST
Last Updated 14 ಆಗಸ್ಟ್ 2025, 18:59 IST
ಎನ್‌ಎಬಿಕೆ ಕಟ್ಟಡ
ಎನ್‌ಎಬಿಕೆ ಕಟ್ಟಡ   

ಬೆಂಗಳೂರು: ಐದು ದಶಕಗಳಿಂದ ಅಂಧರ ಸಬಲೀಕರಣ ಹಾಗೂ ತರಬೇತಿಯಲ್ಲಿ ನಿರತವಾಗಿರುವ ಸರ್ಕಾರೇತರ ಸಂಸ್ಥೆಯಾದ ರಾಷ್ಟ್ರೀಯ ಅಂಧರ ಸಂಘ-ಕರ್ನಾಟಕ (ಎನ್‌ಎಬಿಕೆ), ಜೀವನ್ ಬಿಮಾ ನಗರದಲ್ಲಿರುವ ತನ್ನ ಪ್ರಧಾನ ಕಚೇರಿಯ ಗುತ್ತಿಗೆ ನವೀಕರಿಸಲು ₹ 2 ಕೋಟಿ ನಿಧಿಗೆ ಸಾರ್ವಜನಿಕರ ಬೆಂಬಲ ಕೋರಿದೆ. 

1977ರಲ್ಲಿ ಸ್ಥಾಪನೆಯಾದ ಎನ್‌ಎಬಿಕೆಗೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 1985 ರಲ್ಲಿ ನಿವೇಶನ ಹಂಚಿಕೆ ಮಾಡಿತ್ತು. 1986ರಲ್ಲಿ ಅಲ್ಲಿ ಕಟ್ಟಡ ತಲೆಯೆತ್ತಿತ್ತು. ಸಂಘದ 30 ವರ್ಷಗಳ ಭೋಗ್ಯ 2015ರಲ್ಲಿ ಅಂತ್ಯಗೊಂಡಿದೆ. ನಿವೇಶನದ ಭೋಗ್ಯ ನವೀಕರಣಕ್ಕೆ ಸಂಬಂಧಿಸಿದಂತೆ ಹಣ ಪಾವತಿಗೆ ನವೆಂಬರ್ 1ರವರೆಗೆ ಕಾಲಾವಕಾಶ ನೀಡಲಾಗಿದ್ದು, ಈ ನವೀಕರಣದಿಂದ 2046ರವರೆಗೆ ಅವಧಿ ವಿಸ್ತರಣೆಯಾಗಲಿದೆ. 

‘ನವೀಕರಣಕ್ಕೆ ಸಂಬಂಧಿಸಿದಂತೆ ಅವಧಿ ಮುಕ್ತಾಯಗೊಂಡಾಗಿನಿಂದ ಬಿಡಿಎ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ. ನವೀಕರಣ ವಿಳಂಬಕ್ಕೆ ಸಂಬಂಧಿಸಿದ ದಂಡ ಮತ್ತು ಬಡ್ದಿಯನ್ನು ಮನ್ನಾ ಮಾಡಿ ಪ್ರಾಧಿಕಾರವು ಇತ್ತೀಚೆಗೆ ಆದೇಶವನ್ನೂ ಹೊರಡಿಸಿದೆ. ಕೆಲ ಹಿತೈಷಿಗಳು ಹಾಗೂ ಕಾರ್ಪೊರೇಟ್ ಬೆಂಬಲಿಗರು ಸುಮಾರು ₹ 35 ಲಕ್ಷದಿಂದ ₹ 40 ಲಕ್ಷ ನೀಡಿದ್ದಾರೆ’ ಎಂದು ಸಂಸ್ಥೆಯ ಗೌರವ ಉಪಾಧ್ಯಕ್ಷ ಶ್ರೀಕಾಂತ್ ರಾವ್ ತಿಳಿಸಿದರು. 

ADVERTISEMENT

ಎನ್‌ಎಬಿಕೆ ಕೇಂದ್ರವು ಕೌಶಲ ಅಭಿವೃದ್ಧಿಯ ಜತೆಗೆ,  ಆಹಾರ ಮತ್ತು ವಸತಿ ಸಹಿತ ಉಚಿತ ತರಬೇತಿಯನ್ನು ನೀಡುತ್ತಿದೆ. ವೃತ್ತಿಪರ ತರಬೇತಿಗಳನ್ನು ನಡೆಸುತ್ತಿದೆ. ಉಡುಪು ತಯಾರಿಕೆ, ‘ಲೈಟ್ ಎಂಜಿನಿಯರಿಂಗ’ನಂತಹ ಕೌಶಲದ ತರಬೇತಿ ಒಳಗೊಂಡಿದೆ 

‘ಕಂಪ್ಯೂಟರ್ ತರಬೇತಿಯನ್ನೂ ಒದಗಿಸಲಾಗುತ್ತಿದೆ. ಇದರಿಂದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ಲಭ್ಯವಾಗುತ್ತಿದೆ’ ಎಂದು ಶ್ರೀಕಾಂತ್ ರಾವ್ ಹೇಳಿದರು. 

ಕಳೆದ ವರ್ಷ ಸುಮಾರು 120 ವಿದ್ಯಾರ್ಥಿಗಳಿಗೆ  ಫೌಂಡೇಷನ್ ಕೋರ್ಸ್‌ಗಳಲ್ಲಿ ತರಬೇತಿ ಒದಗಿಸಲಾಗಿದೆ. 95 ಮಂದಿಗೆ ಬೆಸಿಕ್ ಕಂಪ್ಯೂಟರ್ ಕೌಶಲ, 50 ಮಂದಿಗೆ ಮುಂದುವರಿದ ಕಂಪ್ಯೂಟರ್ ಬಳಕೆ ಬಗ್ಗೆ, 50 ಮಂದಿಗೆ ವಿವಿಧ ಉದ್ಯೋಗ ಕೌಶಲ, 75 ಮಂದಿಗೆ ವಾಕ್‌ ಮತ್ತು ಶ್ರವಣ ತರಬೇತಿ ಒದಗಿಸಲಾಗಿದೆ. 

ದೇಣಿಗೆ ನೀಡಲು ಹಾಗೂ ಸಂಪರ್ಕಕ್ಕೆ: 63638 91284, ಇಮೇಲ್ ವಿಳಾಸ: outreach@nabkarnataka.org.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.