ಮಾವಳ್ಳಿ ಶಂಕರ್
ಬೆಂಗಳೂರು: ‘ಹೊಲಯ ಮತ್ತು ಮಾದಿಗ ಸಮುದಾಯಗಳ ನಡುವೆ ಒಡಕು ಬರದಂತೆ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿಯನ್ನು ಪರಿಷ್ಕರಿಸಿ, ಒಳ ಮೀಸಲಾತಿ ಜಾರಿಗೊಳಿಸಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆಗ್ರಹಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಗಮೋಹನದಾಸ್ ಆಯೋಗದ ವರದಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿಗೊಳಿಸಲು ಐದು ಪ್ರವರ್ಗಗಳನ್ನಾಗಿ ವರ್ಗೀಕರಿಸಲಾಗಿದೆ. ‘ಸಿ’ ಪ್ರವರ್ಗದಲ್ಲಿ ಇರಬೇಕಾದ ಹೊಲಯ ಸಂಬಂಧಿತ ಜಾತಿಗಳನ್ನು ‘ಎ’ ಹಾಗೂ ‘ಬಿ’ ಪ್ರವರ್ಗದಲ್ಲಿ ಸೇರಿಸುವ ಮೂಲಕ ಹೊಲಯ ಸಂಬಂಧಿತ ಜಾತಿಗಳ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಇದು ಹೊಲಯ ಮತ್ತು ಮಾದಿಗ ಸಮುದಾಯಗಳ ಅಸಮಾಧಾನಕ್ಕೆ ಕಾರಣವಾಗಿದೆ’ ಎಂದು ದೂರಿದರು.
‘ನಾಗಮೋಹನದಾಸ್ ಆಯೋಗವು ಪ್ರವರ್ಗಗಳನ್ನು ವಿಂಗಡಿಸುವಾಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅತ್ಯಂತ, ಅತಿ ಸೂಕ್ಷ್ಮ ಹಾಗೂ ಸೂಕ್ಷ್ಮ ಸಣ್ಣ–ಸಣ್ಣ ಜಾತಿಗಳನ್ನು (ಹಿಂದುಳಿದಿರುವಿಕೆಯನ್ನು ಗಮನದಲ್ಲಿಟ್ಟುಕೊಂಡು) ಪ್ರವರ್ಗ ‘ಎ’ನಲ್ಲಿ ಉಳಿಸಿಕೊಳ್ಳಬೇಕಿತ್ತು. ಪ್ರವರ್ಗ ‘ಬಿ’ನಲ್ಲಿ ಮಾದಿಗ ಸಂಬಂಧಿತ ಮತ್ತು ಪ್ರವರ್ಗ ‘ಸಿ’ನಲ್ಲಿ ಹೊಲಯ ಸಂಬಂಧಿತ ಜಾತಿಗಳನ್ನು ವಿಭಾಗಿಸಿದ್ದರೆ, ಈ ಗೊಂದಲ ಸೃಷ್ಟಿ ಆಗುತ್ತಿರಲಿಲ್ಲ. ಆಗ ಸುಪ್ರೀಂ ಕೋರ್ಟ್ ಆಶಯದಂತೆ ಹಿಂದುಳಿದಿರುವಿಕೆಯ ಆಧಾರದ ಮೇಲೆಯೇ ಒಳ ಮೀಸಲಾತಿ ಹಂಚಿಕೆ ಮಾಡಲು ಅನುಕೂಲವಾಗುತ್ತಿತ್ತು’ ಎಂದರು.
‘ಇ’ ಪ್ರವರ್ಗದಲ್ಲಿರುವ ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಎಂದು ಸಮೀಕ್ಷೆಯಲ್ಲಿ ಗುರುತಿಸಿಕೊಂಡಿರುವ 4,74,954 ಜನಸಂಖ್ಯೆಯನ್ನು ಪುನರ್ ಪರಿಶೀಲಿಸಿ, ಪ್ರವರ್ಗ ‘ಬಿ’ ಮತ್ತು ‘ಸಿ’ಗೆ ವರ್ಗಾವಣೆ ಮಾಡಬೇಕು. ರಾಜ್ಯ ಸರ್ಕಾರ ನಾಗಮೋಹನ್‌ದಾಸ್ ಆಯೋಗದ ವರದಿಯನ್ನು ಸಮಗ್ರವಾಗಿ ಪರಿಷ್ಕರಿಸಿ, ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕಾರಳ್ಳಿ ಶ್ರೀನಿವಾಸ್, ಸಮಿತಿಯ ಮಹಿಳಾ ಘಟಕದ ರಾಜ್ಯ ಸಂಚಾಲಕಿ ನಿರ್ಮಲಾ, ವಿಭಾಗೀಯ ಸಂಚಾಲಕ ಮಣಿಪಾಲ್ ರಾಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.