ADVERTISEMENT

66 ಮೆಟ್ರೊ ಪೂರೈಸಿ ನಿರ್ವಹಿಸಲಿರುವ ಬೆಮೆಲ್‌

15 ವರ್ಷ ನಿರ್ವಹಣೆಯ ಜವಾಬ್ದಾರಿ | ಗುಲಾಬಿ ಮಾರ್ಗಕ್ಕೆ ಮೊದಲ ರೈಲು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 23:30 IST
Last Updated 12 ಡಿಸೆಂಬರ್ 2025, 23:30 IST
ಹೊಸ ತಿಪ್ಪಸಂದ್ರದಲ್ಲಿರುವ ಬಿಇಎಂಎಲ್‌ ಕಾರ್ಯಾಗಾರದಲ್ಲಿ ಗುಲಾಬಿ ಮಾರ್ಗಕ್ಕೆ ಮೊದಲ ಮೆಟ್ರೊ ಅನಾವರಣಗೊಳಿಸಲಾಯಿತು
ಹೊಸ ತಿಪ್ಪಸಂದ್ರದಲ್ಲಿರುವ ಬಿಇಎಂಎಲ್‌ ಕಾರ್ಯಾಗಾರದಲ್ಲಿ ಗುಲಾಬಿ ಮಾರ್ಗಕ್ಕೆ ಮೊದಲ ಮೆಟ್ರೊ ಅನಾವರಣಗೊಳಿಸಲಾಯಿತು   

ಬೆಂಗಳೂರು: ನಮ್ಮ ಮೆಟ್ರೊ ಗುಲಾಬಿ, ನೀಲಿ ಮತ್ತು ಹಳದಿ ಮಾರ್ಗಗಳಿಗೆ 66 ಚಾಲಕರಹಿತ ಎಂಜಿನ್‌ ಹೊಂದಿರುವ ಮೆಟ್ರೊ ರೈಲುಗಳನ್ನು ಪೂರೈಸಲಿರುವ ಬಿಇಎಂಎಲ್‌ (ಬೆಮೆಲ್‌) 15 ವರ್ಷ ರೈಲುಗಳನ್ನು ನಿರ್ವಹಣೆ ಮಾಡಲಿದೆ. 

ಗುಲಾಬಿ ಮಾರ್ಗಕ್ಕೆ ಮೊದಲ ರೈಲು ಕೋಚ್‌ಗಳನ್ನು ಗುರುವಾರ ಬಿಡುಗಡೆ ಮಾಡಿದ್ದು, ಹಂತಹಂತವಾಗಿ ಉಳಿದ ಕೋಚ್‌ಗಳನ್ನು ಬಿಡುಗಡೆ ಮಾಡುವುದಾಗಿ ಬಿಇಎಂಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಯು) ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್‌) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರೇ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್ ರೈಲು ಕೋಚ್‌ಗಳನ್ನು ಹೊಸ ತಿಪ್ಪಸಂದ್ರದಲ್ಲಿರುವ ಬಿಇಎಂಎಲ್‌ ಕಾರ್ಯಾಗಾರದಲ್ಲಿ ಅನಾವರಣಗೊಳಿಸಿದರು. ಬಳಿಕ ಪರೀಕ್ಷಾರ್ಥ ಸಂಚಾರವನ್ನು ನಡೆಸಲಾಯಿತು.

ADVERTISEMENT

ನಮ್ಮ ಮೊಟ್ರೊ ನೇರಳೆ ಮತ್ತು ಹಸಿರು ಮಾರ್ಗಗಳಿಗೆ 57 ಮೆಟ್ರೊಗಳನ್ನು ಬಿಇಎಂಎಲ್‌ ಹಿಂದೆ ಪೂರೈಸಿತ್ತು. ಬಳಿಕ ಹಳದಿ ಮಾರ್ಗಕ್ಕೆ 15 ರೈಲು ಸೇರಿ ಒಟ್ಟು 36 ರೈಲುಗಳನ್ನು ಪೂರೈಸುವ ಗುತ್ತಿಗೆಯನ್ನು ಚೀನಾದ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ) ನಾನ್‌ಜಿಂಗ್ ಪುಜೆನ್ ಕಂಪನಿ ಪಡೆದಿತ್ತು. 

ಮತ್ತೆ 53 ಮೆಟ್ರೊ ಕೋಚ್‌ಗಳನ್ನು ಪೂರೈಸಲು ಬಿಎಂಆರ್‌ಸಿಎಲ್ ಜೊತೆಗೆ ಬಿಇಎಂಎಲ್‌ ₹3,177 ಕೋಟಿಯ ಒಪ್ಪಂದವನ್ನು 2023ರಲ್ಲಿ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ ಗುಲಾಬಿ ಮಾರ್ಗಕ್ಕೆ 16 ಹಾಗೂ ನೀಲಿ ಮಾರ್ಗಕ್ಕೆ 37 ಕೋಚ್‌ಗಳನ್ನು ಪೂರೈಸಲಿದೆ. ಇದರ ಜೊತೆಗೆ ₹ 405 ಕೋಟಿ ವೆಚ್ಚದಲ್ಲಿ ಗುಲಾಬಿ ಮಾರ್ಗಕ್ಕೆ ಏಳು ಕೋಚ್‌ಗಳು, ಹಳದಿ ಮಾರ್ಗಕ್ಕೆ ₹414 ಕೋಟಿ ವೆಚ್ಚದಲ್ಲಿ 6 ಕೋಚ್‌ಗಳನ್ನು ಪೂರೈಸುವ ಒಪ್ಪಂದವನ್ನು ಈ ವರ್ಷ ಮಾಡಿಕೊಂಡಿದೆ.

ನೇರಳೆ, ಹಸಿರು, ಹಳದಿ–ಕಾರ್ಯಾಚರಣೆಯಲ್ಲಿರುವ ಮಾರ್ಗಗಳು ಗುಲಾಬಿ, ನೀಲಿ–ಸಂಚಾರಕ್ಕೆ ತಯಾರಾಗುತ್ತಿರುವ ಮಾರ್ಗಗಳು  ಕಿತ್ತಳೆ, ಬೆಳ್ಳಿ–ಅನುಮೋದನೆಗೊಂಡಿರುವ ಮಾರ್ಗಗಳು ಕೆಂಪು– ಅನುಮೋದನೆಗೆ ಕಾಯುತ್ತಿರುವ ಮಾರ್ಗ

ಗುಲಾಬಿ ಮಾರ್ಗ: ಆರು ತಿಂಗಳಲ್ಲಿ ಸಂಚಾರ

ಕಾಳೇನ ಅಗ್ರಹಾರ–ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗದಲ್ಲಿ ಭಾಗಶಃ ಸಂಚಾರವನ್ನು 2026ರ ಮೇನಲ್ಲಿ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಇಟ್ಟುಕೊಂಡಿದೆ. 21.26 ಕಿ.ಮೀ. ಉದ್ದದ ಈ ಮಾರ್ಗವು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.50 ಕಿ.ಮೀ. ಎತ್ತರಿಸಿದ ಮಾರ್ಗವನ್ನು ಹಾಗೂ ಅಲ್ಲಿಂದ ನಾಗವಾರವರೆಗೆ ಸುರಂಗ ಮಾರ್ಗವನ್ನು ಹೊಂದಿದೆ. ಎತ್ತರಿಸಿದ ಮಾರ್ಗದಲ್ಲಿ ಆರು ರೈಲುಗಳೊಂದಿಗೆ ಮೊದಲು ಸಂಚಾರ ಆರಂಭಗೊಳ್ಳಲಿದೆ. ಭೂಗತ ಮಾರ್ಗದಲ್ಲಿ 2027ರ ಡಿಸೆಂಬರ್‌ನಲ್ಲಿ ಆರಂಭಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ರೇಷ್ಮೆ ಮಂಡಳಿಯಿಂದ (ಸೆಂಟ್ರಲ್‌ ಸಿಲ್ಕ್ ಬೋರ್ಡ್‌) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ನೀಲಿ ಮಾರ್ಗದಲ್ಲಿ (58.19 ಕಿ.ಮೀ.) ಮೂರು ಹಂತದಲ್ಲಿ ಮೆಟ್ರೊ ರೈಲು ಸಂಚಾರ ಆರಂಭಗೊಳ್ಳಲಿದೆ. ರೇಷ್ಮೆ ಮಂಡಳಿಯಿಂದ ಕೆ.ಆರ್‌.ಪುರವರೆಗೆ 2026ರ ಸೆಪ್ಟೆಂಬರ್‌ನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಬ್ಬಾಳವರೆಗೆ 2027ರ ಜೂನ್‌ನಲ್ಲಿ ಹಾಗೂ ಕೆ.ಆರ್‌.ಪುರದಿಂದ ಹೆಬ್ಬಾಳದವರೆಗೆ 2027ರ ಡಿಸೆಂಬರ್‌ನಲ್ಲಿ ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.